ಆಂಧ್ರದಲ್ಲಿ ‘ರಾಜಣ್ಣ ಬಡಿಬಾಟ’ ಯೋಜನೆಗೆ ಚಾಲನೆ (ಮಕ್ಕಳನ್ನು ಶಾಲೆಗೆ ಸೇರಿಸಿದರೆ 15ಸಾವಿರ)

0
23

ತನ್ನ ಮಕ್ಕಳನ್ನು ಶಾಲೆಗೆ ಕಳುಹಿಸುವ ಬಡ ಕುಟುಂಬಗಳ ಪ್ರತಿ ಮಹಿಳೆಗೆ ತಲಾ 15,000 ನೀಡುವುದಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಘೋಷಿಸಿದರು.

ಅಮರಾವತಿ: ತನ್ನ ಮಕ್ಕಳನ್ನು ಶಾಲೆಗೆ ಕಳುಹಿಸುವ ಬಡ ಕುಟುಂಬಗಳ ಪ್ರತಿ ಮಹಿಳೆಗೆ ತಲಾ  15,000 ನೀಡುವುದಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಘೋಷಿಸಿದರು.

ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಪಾಲಕರಿಗೆ ಉತ್ತೇಜನ ನೀಡುವ ಸಲುವಾಗಿ ಸರ್ಕಾರ ರೂಪಿಸಿರುವ ‘ರಾಜಣ್ಣ ಬಡಿಬಾಟ’ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಖಾಸಗಿ ಶಾಲೆಗಳ ದುಬಾರಿ ಶುಲ್ಕ ಭರಿಸಲು ಸಾಧ್ಯವಾಗದ ಅನೇಕ ಪಾಲಕರು, ಮಕ್ಕಳನ್ನು ಶಾಲೆಗೆ ಕಳುಹಿಸಲಾಗದೆ ಪರಿತಪಿಸುತ್ತಿರುವುದನ್ನು, ರಾಜ್ಯದಾದ್ಯಂತ ಪಾದಯಾತ್ರೆ ನಡೆಸುವಾಗ ನಾನು ಕಂಡಿದ್ದೇನೆ’ ಎಂದರು.

‘ಬಡ ಕುಟುಂಬಗಳಿಗೆ ನೆರವಾಗಬೇಕು ಎಂದು ಆಗಲೇ ತೀರ್ಮಾನಿಸಿದ್ದೆ. ಮಕ್ಕಳನ್ನು ಶಾಲೆಗೆ ಕಳುಹಿಸುವ (ಸರ್ಕಾರಿ ಅಥವಾ ಖಾಸಗಿ ಶಾಲೆ) ರಾಜ್ಯದ ಎಲ್ಲಾ ಬಡ ಕುಟುಂಬಗಳ ತಾಯಂದಿರಿಗೆ ಜನವರಿ 26ರಂದು ಈ ಹಣವನ್ನು ವಿತರಿಸಲಾಗುವುದು’ ಎಂದು ತಿಳಿಸಿದರು.
 
‘ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ, ತಡೆಗೋಡೆ, ವಿದ್ಯುತ್‌ ಸಂಪರ್ಕ ಮುಂತಾದ ಮೂಲ ಸೌಲಭ್ಯಗಳಿಲ್ಲ. ರಾಷ್ಟ್ರದ ಸರಾಸರಿ ಅನಕ್ಷರತೆಯ ಪ್ರಮಾಣ ಶೇ 26ರಷ್ಟಿದ್ದರೆ, ಆಂಧ್ರದಲ್ಲಿ ಅದರ ಪ್ರಮಾಣ ಶೇ 33ರಷ್ಟಿದೆ. ಇದನ್ನು ಗಮನದಲ್ಲಿಟ್ಟು ಹೊಸ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಮುಂದಿನ ಎರಡು ವರ್ಷದೊಳಗೆ ಇಡೀ ವ್ಯವಸ್ಥೆಯನ್ನು ಸರಿಪಡಿಸುವ ಭರವಸೆ ನೀಡುತ್ತೇನೆ’ ಎಂದರು.
 
ಜಗನ್‌ಮೋಹನ್‌ ರೆಡ್ಡಿ ಅವರು ಚುನಾವಣೆಯ ಸಂದರ್ಭದಲ್ಲಿ ಘೋಷಿಸಿದ್ದ ‘ನವರತ್ನ’ ಯೋಜನೆಯಲ್ಲಿ ‘ರಾಜಣ್ಣ ಬಡಿಬಾಟ’ವೂ ಒಂದು.