ಆಂಧ್ರದಲ್ಲಿ ತೆಲುಗಿಗೆ ಗುಡ್‌ಬೈ: ಇಂಗ್ಲಿಷ್‌ಗೆ ಶರಣು! (ಮುಂದಿನ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ)

0
12

1ರಿಂದ 8ನೇ ತರಗತಿವರೆಗೆ ಬೋಧಿಸುವ ಎಲ್ಲ ಸರ್ಕಾರಿ ಶಾಲೆಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಇಂಗ್ಲಿಷ್‌ ಮಾಧ್ಯಮಕ್ಕೆ ಪರಿವರ್ತಿಸುವ ಮಹತ್ವದ ನಿರ್ಧಾರವನ್ನು ಆಂಧ್ರಪ್ರದೇಶ ಸರ್ಕಾರ ಕೈಗೊಂಡಿದೆ.

ಅಮರಾವತಿ: 1ರಿಂದ 8ನೇ ತರಗತಿವರೆಗೆ ಬೋಧಿಸುವ ಎಲ್ಲ ಸರ್ಕಾರಿ ಶಾಲೆಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಇಂಗ್ಲಿಷ್‌ ಮಾಧ್ಯಮಕ್ಕೆ ಪರಿವರ್ತಿಸುವ ಮಹತ್ವದ ನಿರ್ಧಾರವನ್ನು ಆಂಧ್ರಪ್ರದೇಶ ಸರ್ಕಾರ ಕೈಗೊಂಡಿದೆ.

ತೆಲುಗು ಅಥವಾ ಉರ್ದು ಭಾಷೆಯನ್ನು ಕಡ್ಡಾಯ ವಿಷಯವನ್ನಾಗಿ ಮಾಡಲು ನಿರ್ಣಯಿಸಲಾಗಿದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ತೆಲುಗು ರಾಜ್ಯದಲ್ಲಿಯೇ ಆ ಭಾಷೆಯ ಮಾಧ್ಯಮದ ಶಾಲೆಗಳೇ ಇರುವುದಿಲ್ಲ.

2020–21ನೇ ಶೈಕ್ಷಣಿಕ ವರ್ಷದಿಂದ ಸರ್ಕಾರಿ, ಮಂಡಳ (ಬ್ಲಾಕ್‌) ಪರಿಷತ್‌ ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಶಾಲೆಗಳನ್ನು ಇಂಗ್ಲಿಷ್‌ ಮಾಧ್ಯಮಕ್ಕೆ ಬದಲಾಯಿಸಲಾಗುವುದು’ ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ. ರಾಜಶೇಖರ್‌ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

2021–22ನೇ ಶೈಕ್ಷಣಿಕ ವರ್ಷದಿಂದ ಎಲ್ಲ ಶಾಲೆಗಳಲ್ಲಿನ 9 ಮತ್ತು 10ನೇ ತರಗತಿಗಳನ್ನು ಇಂಗ್ಲಿಷ್‌ ಮಾಧ್ಯಮಕ್ಕೆ ಬದಲಾಯಿಸಲು ಉದ್ದೇಶಿಸಲಾಗಿದೆ ಎಂದು ಆದೇಶ ವಿವರಿಸಿದೆ.

ಸರ್ಕಾರದ ಈ ನಿರ್ಧಾರವನ್ನು ಶಿಕ್ಷಕರ ಸಂಘಟನೆಗಳು ವಿರೋಧಿಸಿವೆ. ತೆಲುಗು ಮಾಧ್ಯಮದಲ್ಲಿ ಬೋಧಿಸುವ ಹಲವು ಶಿಕ್ಷಕರು ಸಹ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧನೆ ಮಾಡಲು ನೀಡಿರುವ ಕಾಲಾವಕಾಶವೂ ಕಡಿಮೆ ಇದೆ. ಸಾಕಷ್ಟು ಸಿದ್ಧತೆಯ ಅಗತ್ಯವಿತ್ತು. ಶಿಕ್ಷಕರಿಗೆ ತರಬೇತಿಯ ಅಗತ್ಯವಿದೆ. ಎಲ್ಲ ಶಾಲೆಗಳ ಬದಲು ಮೊದಲ ಹಂತದಲ್ಲಿ ಅರ್ಧದಷ್ಟು ಶಾಲೆಗಳನ್ನು ಇಂಗ್ಲಿಷ್‌ಗೆ ಪರಿವರ್ತಿಸಬಹುದಿತ್ತು. ಉಳಿದ ಶಾಲೆಗಳನ್ನು ಹಂತ ಹಂತವಾಗಿ ಬದಲಾಯಿಸಬಹುದಿತ್ತು’ ಎಂದು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆಯೂ ವೈ.ಎಸ್‌. ರಾಜಶೇಖರ ರೆಡ್ಡಿ ನೇತೃತ್ವದ ಸರ್ಕಾರ ಪ್ರಾಯೋಗಿಕವಾಗಿ 6,500 ಶಾಲೆಗಳಲ್ಲಿ ತೆಲುಗು ವಿಭಾಗಗಳಿಗೆ ಪರ್ಯಾಯವಾಗಿ ಇಂಗ್ಲಿಷ್‌ ಮಾಧ್ಯಮ ವಿಭಾಗಗಳನ್ನು ಆರಂಭಿಸಿತ್ತು. ಅದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಈ ನಿರ್ಧಾರ ಕಸ್ತೂರಿ ರಂಗನ್‌ ಸಮಿತಿ ಶಿಫಾರಸ್ಸುಗಳಿಗೆ ವಿರುದ್ಧವಾಗಿದೆ. ಪ್ರಾಥಮಿಕ ಶಾಲೆಗ ಳಲ್ಲಿ ಮಾತೃಭಾಷೆಯಲ್ಲೇ ಬೋಧನೆ ಮಾಡಬೇಕು ಎಂದು ಹೇಳಲಾಗಿತ್ತು.   
             – ಕೆ. ನರಸಿಂಹರೆಡ್ಡಿ ವಿಧಾನ ಪರಿಷತ್‌ ಸದಸ್ಯ