ಅರೆಸೇನಾಪಡೆ ಸಿಬ್ಬಂದಿ ನಿವೃತ್ತಿ ವಯಸ್ಸು 60 ವರ್ಷ

0
21

ಅರೆಸೇನಾಪಡೆಗಳ ಎಲ್ಲ ಶ್ರೇಣಿಯ ಸಿಬ್ಬಂದಿಗೆ ಅನ್ವಯಿಸಿ ಏಕರೂಪವಾಗಿ ನಿವೃತ್ತಿ ವಯಸ್ಸು 60 ವರ್ಷ ಆಗಲಿದೆ. ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಆಗಸ್ಟ್ 19 ರ ಸೋಮವಾರ ಆದೇಶ ಹೊರಡಿಸಿದೆ. ಹೊಸ ನಿಯಮ ತಕ್ಷಣದಿಂದ ಜಾರಿಗೆ ಬರಲಿದೆ.

ನವದೆಹಲಿ: ಅರೆಸೇನಾಪಡೆಗಳ ಎಲ್ಲ ಶ್ರೇಣಿಯ ಸಿಬ್ಬಂದಿಗೆ ಅನ್ವಯಿಸಿ ಏಕರೂಪವಾಗಿ ನಿವೃತ್ತಿ ವಯಸ್ಸು 60 ವರ್ಷ ಆಗಲಿದೆ. ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಸೋಮವಾರ ಆದೇಶ ಹೊರಡಿಸಿದೆ. ಹೊಸ ನಿಯಮ ತಕ್ಷಣದಿಂದ ಜಾರಿಗೆ ಬರಲಿದೆ.

ದೆಹಲಿ ಹೈಕೋರ್ಟ್‌ ಈ ವರ್ಷ ಜನವರಿಯಲ್ಲಿ ಈ ಬಗ್ಗೆ ಆದೇಶ ನೀಡಿ ‘ನಿವೃತ್ತಿ ವಯಸ್ಸು ಕುರಿತ ಹಾಲಿ ನೀತಿ ತಾರತಮ್ಯದಿಂದ ಕೂಡಿದೆ. ಅಸಾಂವಿಧಾನಿಕವಾಗಿವೆ. ಏಕರೂಪದ ಪಡೆಯಲ್ಲಿ ಎರಡು ಶ್ರೇಣಿಯನ್ನು ರೂಪಿಸಿದೆ’ ಎಂದು ಅಭಿಪ್ರಾಯಪಟ್ಟಿತ್ತು.

ಕೇಂದ್ರದ ಆದೇಶದಂತೆ ಸಿಆರ್‌ ಪಿಎಫ್‌, ಬಿಎಸ್ಎಫ್‌, ಐಟಿಬಿಪಿ, ಎಸ್ಎಸ್‌ಬಿ, ಸಿಐಎಸ್‌ಎಫ್‌ ಮತ್ತು ಅಸ್ಸಾಂ ರೈಫಲ್‌ನ ಎಲ್ಲ ಸಿಬ್ಬಂದಿಯೂ ತಮ್ಮ 60ನೇ ವಯಸ್ಸಿನಲ್ಲಿ ನಿವೃತ್ತರಾಗುವರು.

ಹಾಲಿ ಕೆಲ ಶ್ರೇಣಿಯ ಸಿಬ್ಬಂದಿ 57ನೇ ವರ್ಷಕ್ಕೆ ನಿವೃತ್ತರಾಗುತ್ತಿದ್ದರು. ಸಿಆರ್‌ಪಿಎಫ್‌, ಬಿಎಸ್‌ಎಫ್‌, ಐಟಿಬಿಪಿ ಮತ್ತು ಎಸ್‌ಎಸ್‌ಬಿಯಲ್ಲಿ ಕಮಾಡೆಂಟ್‌ ಮತ್ತು ಮೇಲಿನ ದರ್ಜೆಯ ಅಧಿಕಾರಿಗಳು 60ನೇ ವರ್ಷಕ್ಕೆ ನಿವೃತ್ತರಾಗುತ್ತಿದ್ದರು.

ಕೋರ್ಟ್‌ ಆದೇಶದ ಅನುಸಾರ ಸಂಬಂಧಿಸಿದ ನಿಯಮಾವಳಿಗಳಿಗೆ ತಿದ್ದುಪಡಿ ತರಬೇಕು ಎಂದು ಸಂಬಂಧಿತ ಎಲ್ಲ ಪಡೆಗಳಿಗೆ ನಿರ್ದೇಶನ ನೀಡಲಾಗಿದೆ. ನಿವೃತ್ತಿ ವಯಸ್ಸು ವಿರುದ್ಧ ತಡೆಯಾಜ್ಞೆ ತಂದಿದ್ದವರಿಗೂ ಹೊಸ ಆದೇಶ ಅನ್ವಯವಾಗಲಿದೆ.

ಈಗಾಗಲೇ ನಿವೃತ್ತರಾಗಿದ್ದು, ಕೋರ್ಟ್‌ನಲ್ಲಿ ಪ್ರಶ್ನಿಸದೇ ಇರುವವರಿಗೂ ಈ ಅದೇಶ ಅನ್ವಯವಾಗಲಿದೆ. ಒಂದು ವೇಳೆ ಅವರು ನಿವೃತ್ತಿ ಸೌಲಭ್ಯಗಳನ್ನು ಪಡೆದಿದ್ದರೆ ಹಿಂದಿರುಗಿಸಿ ಸೇವೆಗೆ ಮರು ಸೇರ್ಪಡೆ ಆಗಬಹುದು ಎಂದು ತಿಳಿಸಲಾಗಿದೆ.