ಅರೆಕಾಲಿಕ ಉದ್ಯೋಗ ಸೌಲಭ್ಯ ‘ಅಮೆಜಾನ್‌ ಫ್ಲೆಕ್ಸ್‌’ಗೆ ಚಾಲನೆ

0
18

ಇ–ಕಾಮರ್ಸ್‌ನ ಪ್ರಮುಖ ಸಂಸ್ಥೆ ಅಮೆಜಾನ್‌ ಇಂಡಿಯಾ, ಆಸಕ್ತರು ತಮ್ಮ ಬಿಡುವಿನ ವೇಳೆಯಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಸಂಸ್ಥೆಯ ಸರಕು ಪೂರೈಸುವ ‘ಅಮೆಜಾನ್‌ ಫ್ಲೆಕ್ಸ್‌’ ಸೇವೆಗೆ ನಗರದಲ್ಲಿ ಗುರುವಾರ ಚಾಲನೆ ನೀಡಿದೆ.

ಬೆಂಗಳೂರು: ಇ–ಕಾಮರ್ಸ್‌ನ ಪ್ರಮುಖ ಸಂಸ್ಥೆ ಅಮೆಜಾನ್‌ ಇಂಡಿಯಾ, ಆಸಕ್ತರು ತಮ್ಮ ಬಿಡುವಿನ ವೇಳೆಯಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಸಂಸ್ಥೆಯ ಸರಕು ಪೂರೈಸುವ ‘ಅಮೆಜಾನ್‌ ಫ್ಲೆಕ್ಸ್‌’ ಸೇವೆಗೆ ನಗರದಲ್ಲಿ ಜೂನ್ 13 ರ ಗುರುವಾರ ಚಾಲನೆ ನೀಡಿದೆ.

ಆಸಕ್ತ ಸ್ತ್ರೀ– ಪುರುಷರು ತಮ್ಮ ಕಲಿಕೆ, ಪೂರ್ಣಾವಧಿ ಉದ್ಯೋಗ ಮತ್ತು ಮನೆಗೆಲಸದ ಬಿಡುವಿನ ಸಮಯದಲ್ಲಿ ಅಮೆಜಾನ್‌ ಸರಕುಗಳನ್ನು ಗ್ರಾಹಕರಿಗೆ ತಲುಪಿಸಿ ಗಂಟೆಗಳ ಲೆಕ್ಕದಲ್ಲಿ ಆದಾಯ ಗಳಿಸಬಹುದಾದ ಅರೆಕಾಲಿಕ ಉದ್ಯೋಗ ಅವಕಾಶ ಇದಾಗಿದೆ.

‘ವಿಶ್ವದ 6 ದೇಶಗಳಲ್ಲಿ ಜಾರಿಯಲ್ಲಿ ಇರುವ ಈ ಸೇವೆಯ ಯಶಸ್ಸಿನಿಂದ ಉತ್ತೇಜನೆಗೊಂಡು ಭಾರತದಲ್ಲಿಯೂ ಈ ಸೇವೆ ಆರಂಭಿಸಲಾಗಿದೆ. ತಮ್ಮ ಬಿಡುವಿನ ಸಮಯವನ್ನು ಆದಾಯ ಗಳಿಕೆಗೆ ಸದ್ಬಳಕೆ ಮಾಡಿಕೊಳ್ಳಲು ಇಚ್ಛಿಸುವವರು ತಾವು ನೆಲೆಸಿರುವ ಪ್ರದೇಶದ ವ್ಯಾಪ್ತಿಯಲ್ಲಿ ತಮಗೆ ಅನುಕೂಲಕರ ಸಮಯ ಮತ್ತು ದಿನ,  4 ಗಂಟೆಯವರೆಗೆ  ಸರಕುಗಳನ್ನು ಮನೆ, ಕಚೇರಿಗಳಿಗೆ ತಲುಪಿಸುವ ಅರೆಕಾಲಿಕ ಉದ್ಯೋಗ ಇದಾಗಿದೆ’ ಎಂದು ಸಂಸ್ಥೆಯ ಏಷ್ಯಾ ವಲಯದ ಉಪಾಧ್ಯಕ್ಷ ಅಖಿಲ್‌ ಸಕ್ಸೇನಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೊಬೈಲ್‌ ಆ್ಯ‍ಪ್‌ ಮೂಲಕ ಹೆಸರು ನೋಂದಾಯಿಸಿ ಕೊಂಡು ಈ ಅರೆಕಾಲಿಕ ಉದ್ಯೋಗ ಮಾಡಬಹುದು. 18 ವರ್ಷಕ್ಕಿಂತ ಹೆಚ್ಚಿನ ವಯೋಮಾನದ, ವಾಹನ ಚಾಲನಾ ಪತ್ರ, ಪ್ಯಾನ್‌ ಕಾರ್ಡ್‌ ಮತ್ತು ಸ್ವಂತ ದ್ವಿಚಕ್ರ ವಾಹನ ಹೊಂದಿರುವವರು ಈ ಕೆಲಸಕ್ಕೆ ಅರ್ಹರು. ಗೃಹಿಣಿಯರೂ ಸೇರಬಹುದು.

‘ಮೊಬೈಲ್‌ ಆ್ಯಪ್‌, ಸರಕು ಸಾಗಣೆ ಸೌಲಭ್ಯ ಮತ್ತು ತಂತ್ರಜ್ಞಾನದ ಮೂಲಕ ಈ ಸೇವೆ ನಿರ್ವಹಿಸಲಾಗುವುದು. ಇದರಿಂದ ಸಾವಿರಾರು ಸಂಖ್ಯೆಯ ಅರೆಕಾಲಿಕ ಉದ್ಯೋಗಗಳು ಸೃಷ್ಟಿಯಾಗಲಿವೆ.

‘ಸರಕು ವಿತರಿಸುವ ಪಾಲುದಾರರ ಪೂರ್ವಾಪರಗಳನ್ನು ಸಮಗ್ರವಾಗಿ ಪರಿಶೀಲಿಸಿದ ನಂತರವೇ ಆಯ್ಕೆ ಮಾಡಿಕೊಳ್ಳಲಾಗುವುದು. ಸರಕು ವಿತರಣೆ ಆರಂಭಿಸುವ ಮೊದಲು ಅವರಿಗೆ ಸಮಗ್ರ ತರಬೇತಿ ನೀಡಲಾಗುವುದು. ಅರೆ ಕಾಲಿಕ ಉದ್ಯೋಗಿಗಳಿಗೆ ಗುಂಪು ವಿಮೆ ಸೌಲಭ್ಯ ಕಲ್ಪಿಸಿಕೊಡಲಾಗುವುದು. ಪ್ರತಿ ಗಂಟೆಗೆ  120 ರಿಂದ  140ವರೆಗಿನ ಲೆಕ್ಕದಲ್ಲಿ ಆದಾಯ ಗಳಿಸಬಹುದು’ ಎಂದು ಅವರು ಹೇಳಿದ್ದಾರೆ.