ಅರಬ್‌ ರಾಷ್ಟ್ರಗಳಿಗೆ ಭಾರತೀಯ ವಲಸಿಗರ ಸಂಖ್ಯೆ 62% ಇಳಿಕೆ

0
734

ಉದ್ಯೋಗಕ್ಕಾಗಿ ಅರಬ್‌ ರಾಷ್ಟ್ರಗಳಿಗೆ ವಲಸೆ ಹೋಗುವ ಭಾರತೀಯರ ಸಂಖ್ಯೆ ಕಳೆದ 5 ವರ್ಷಗಳಲ್ಲಿ ಶೇ.62ರಷ್ಟು ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಕುಸಿತದಿಂದ ಉಂಟಾಗಿರುವ ಆರ್ಥಿಕತೆಯ ಮಂದಗತಿ ಸೇರಿದಂತೆ ನಾನಾ ಕಾರಣಗಳಿಂದ ಭಾರತೀಯ ವಲಸಿಗರ ಸಂಖ್ಯೆ ಕಡಿಮೆಯಾಗಿದೆ.

ಹೊಸದಿಲ್ಲಿ : ಉದ್ಯೋಗಕ್ಕಾಗಿ ಅರಬ್‌ ರಾಷ್ಟ್ರಗಳಿಗೆ ವಲಸೆ ಹೋಗುವ ಭಾರತೀಯರ ಸಂಖ್ಯೆ ಕಳೆದ 5 ವರ್ಷಗಳಲ್ಲಿ ಶೇ.62ರಷ್ಟು ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಕುಸಿತದಿಂದ ಉಂಟಾಗಿರುವ ಆರ್ಥಿಕತೆಯ ಮಂದಗತಿ ಸೇರಿದಂತೆ ನಾನಾ ಕಾರಣಗಳಿಂದ ಭಾರತೀಯ ವಲಸಿಗರ ಸಂಖ್ಯೆ ಕಡಿಮೆಯಾಗಿದೆ.

2014ರಲ್ಲಿ ಅತ್ಯಧಿಕ ಎಂದರೆ 7.76 ಲಕ್ಷ ಭಾರತೀಯರು ಕೊಲ್ಲಿ ರಾಷ್ಟ್ರಗಳಿಗೆ ಉದ್ಯೋಗಾವಕಾಶಗಳಿಗೆ ವಲಸೆ ಹೋಗಿದ್ದರು. 2018ರ ವರೆಗಿನ ಐದು ವರ್ಷಗಳಲ್ಲಿ ಶೇ.62ರಷ್ಟು ಇಳಿಕೆ ಕಂಡು ಬಂದಿದೆ. 2018ರ ಮೊದಲ 11 ತಿಂಗಳಲ್ಲಿ 2.95 ಲಕ್ಷ ಮಂದಿ ವಲಸೆ ಹೋಗಿದ್ದಾರೆ. 2017ನೇ ವರ್ಷಕ್ಕೆ ಹೋಲಿಸಿದರೆ ಶೇ.21ರಷ್ಟು ಕುಸಿತ ಕಂಡು ಬಂದಿದೆ. 

ಇ-ಎಮಿಗ್ರೇಷನ್‌ ಕ್ಲಿಯರೆನ್ಸ್‌ ಡೇಟಾ ಪ್ರಕಾರ, 2018ರಲ್ಲಿ ಹೆಚ್ಚಿನ ಭಾರತೀಯ ವಲಸಿಗರು ಅಂದರೆ 1.03 ಲಕ್ಷ ಮಂದಿ ಯುಎಇಗೆ ತೆರಳಿದ್ದಾರೆ. ಅರಬ್‌ ದೇಶಗಳಿಗೆ ತೆರಳಿದ ಒಟ್ಟು ಪ್ರವಾಸಿಗಳಲ್ಲಿ ಶೇ.35ರಷ್ಟು ಮಂದಿ ಯುಎಇಯತ್ತ ತೆರಳಿದ್ದಾರೆ. ನಂತರದ ಸ್ಥಾನದಲ್ಲಿ ಸೌದಿ ಅರೇಬಿಯಾ ಮತ್ತು ಕುವೈತ್‌ಗಳಿವೆ. 

ಅರಬ್‌ದೇಶಗಳಲ್ಲಿ 2017ರಲ್ಲಿ ಸೌದಿ ಅರೇಬಿಯಾ ಹೆಚ್ಚಿನ ಭಾರತೀಯ ಕೆಲಸಗಾರರ ಸೆಳೆಯುವ ಆಕರ್ಷಕ ದೇಶ ಎನ್ನುವ ಹೆಗ್ಗಳಿಕೆಯನ್ನು ಕಳೆದುಕೊಂಡಿತು. 2014ರಲ್ಲಿ 3.29 ಲಕ್ಷ ಭಾರತೀಯರು ಸೌದಿ ಅರೇಬಿಯಾಗೆ ತೆರಳಿದ್ದರು. ಅದು 2018ರಲ್ಲಿ 65,542ಕ್ಕೆ ಇಳಿಕೆಯಾಗಿದೆ. ಈ ತನಕ ಅಲ್ಲಿಗೆ ತೆರಳುವ ಭಾರತೀಯ ವಲಸಿಗರ ಸಂಖ್ಯೆ ಶೇ.80ಕ್ಕೆ ಕುಸಿದಿದೆ. ಸ್ಥಳೀಯ ನೌಕರ ಹಿತಕಾಯುವ ಸೌದಿ ಸರಕಾರದ ನಿತಾಕಟ್‌ ಯೋಜನೆಯು ಭಾರತೀಯರೂ ಸೇರಿದಂತೆ ವಲಸೆ ನೌಕರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. 

ಕತಾರ್‌ನಲ್ಲೂ ಸ್ಥಳೀಯ ನೌಕರರ ಹಿತ ಕಾಯುವ ನಿಯಮಗಳು ಜಾರಿಗೆ ಬಂದಿದ್ದು, ವಲಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಭಾರತೀಯ ವಲಸಿಗರ ಸಂಖ್ಯೆ ಕುಸಿಯಲು ಏನು ಕಾರಣ? 
ಕರ್ನಾಟಕದ ಕರಾವಳಿ ಸೇರಿದಂತೆ ದೇಶದ ನಾನಾ ಭಾಗಗಳಿಂದ ಸಾವಿರಾರು ಭಾರತೀಯರು ಅರಬ್‌ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ಸಂಖ್ಯೆ ದಿಢೀರ್‌ ಕುಸಿಯಲು ಅರಬ್‌ ದೇಶಗಳಲ್ಲಿನ ಆರ್ಥಿಕ ಪರಿಸ್ಥಿತಿ, ವಲಸೆ ನೀತಿಗಳು, ಸ್ಥಳೀಯ ನೌಕರರ ಸಂರಕ್ಷಣೆಗೆ ನೀತಿಗಳು ವಲಸಿಗರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿವೆ. 

ಕಚ್ಚಾ ತೈಲದ ದರಗಳಲ್ಲಿನ ಕುಸಿತವು ಅರಬ್‌ ದೇಶಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರಿವೆ. ಆ ದೇಶಗಳ ಆರ್ಥಿಕತೆಗಳು ಕುಸಿದಿವೆ. ಅಲ್ಲದೇ ಅರಬ್‌ ದೇಶಗಳು ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯಮಗಳಲ್ಲಿ ಹೆಚ್ಚಿನ ಸ್ಥಳೀಯರನ್ನೇ ನೇಮಕ ಮಾಡಿಕೊಂಡಿವೆ. ಇವು ಭಾರತೀಯ ವಲಸಿಗರ ಸಂಖ್ಯೆ ಇಳಿಕೆಗೆ ಕಾರಣಗಳಾಗಿವೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ಸಂಸತ್ತಿಗೆ ನೀಡಿದ ವಿವರಣೆಯಲ್ಲಿ ಹೇಳಿದೆ.