ಅಯೋಧ್ಯೆ: ಸಂಧಾನ ಪ್ರಕ್ರಿಯೆ ವರದಿಗೆ ‘ಸುಪ್ರೀಂ’ ಸೂಚನೆ

0
7

ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದಕ್ಕೆ ಸಂಬಂಧಿಸಿ ನಡೆಯುತ್ತಿರುವ ಮಧ್ಯಸ್ಥಿಕೆ ಪ್ರಕ್ರಿಯೆಯ ಸ್ಥಿತಿಗತಿ ವರದಿಯನ್ನು ವಾರದೊಳಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ನವದೆಹಲಿ (ಪಿಟಿಐ): ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದಕ್ಕೆ ಸಂಬಂಧಿಸಿ ನಡೆಯುತ್ತಿರುವ ಮಧ್ಯಸ್ಥಿಕೆ ಪ್ರಕ್ರಿಯೆಯ ಸ್ಥಿತಿಗತಿ ವರದಿಯನ್ನು ವಾರದೊಳಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. 

ವಿವಾದವು ಸೌಹಾರ್ದಯುತವಾಗಿ ಪರಿಹಾರವಾಗದಿದ್ದರೆ ಇದೇ ಜುಲೈ 25ರಿಂದ ಪ್ರಕರಣದ ವಿಚಾರಣೆಯನ್ನೂ ನಿತ್ಯವು ನಡೆಸಲಾಗುವುದು ಎಂದು ಹೇಳಿದೆ.

ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ಏನೂ ಆಗುತ್ತಿಲ್ಲ, ಹಾಗಾಗಿ ಇದನ್ನು ರದ್ದು ಮಾಡಬೇಕು ಮತ್ತು ನ್ಯಾಯಾಲಯದಲ್ಲಿ ವಿಚಾರಣೆ ಆರಂಭಿಸಬೇಕು ಎಂದು ಕೋರಿ ಮೂಲ ಅರ್ಜಿದಾರರಲ್ಲಿ ಒಬ್ಬರ ಉತ್ತರಾಧಿಕಾರಿ ಗೋಪಾಲ್‌ ಸಿಂಗ್‌ ವಿಷಾರದ ಅವರು ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠವು ಗುರುವಾರ ವಿಚಾರಣೆ ನಡೆಸಿತು. 

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಫ್‌.ಎಂ.ಐ ಖಲೀಫುಲ್ಲಾ ನೇತೃತ್ವದ ಮೂವರು ಸದಸ್ಯರ ಸಮಿತಿಯು ಇದೇ ಜುಲೈ 18 ರೊಳಗೆ ಸ್ಥಿತಿಗತಿ ವರದಿ ಸಲ್ಲಿಸಬೇಕು ಎಂದು ಪೀಠವು ಹೇಳಿದೆ. ಸೌಹಾರ್ದಯುತ ಪರಿಹಾರ ಸಾಧ್ಯವಿಲ್ಲ ಎಂಬುದು ಈ ಅರ್ಜಿಯ ಪರಿಶೀಲನೆಯಿಂದ ದೃಢಪಟ್ಟರೆ ನಿತ್ಯ ವಿಚಾರಣೆ ನಡೆಸುವ ನಿರ್ಧಾರಕ್ಕೆ ಬರಲಾಗುವುದು ಎಂದು ಪೀಠ ತಿಳಿಸಿದೆ. 

ರಾಮ್‌ ಲಲ್ಲಾ ವಿರಾಜ್‌ಮಾನ್ ಪರ ವಕೀಲ ರಂಜಿತ್ ಕುಮಾರ್‌ ಅವರು ವಿಷಾರದ ಅವರ ಅರ್ಜಿಯನ್ನು ಬೆಂಬಲಿಸಿದರು. ವಿವಾದವನ್ನು ಮಧ್ಯಸ್ಥಿಕೆಗೆ ವಹಿಸುವ ವಿಚಾರವನ್ನು ಹಿಂದೆಯೇ ವಿರೋಧಿಸಲಾಗಿತ್ತು ಎಂಬುದನ್ನು ನೆನಪಿಸಿಕೊಂಡರು. ಆದರೆ, ಮುಸ್ಲಿಂ ಕಕ್ಷಿದಾರರ ಪರ ವಕೀಲ ರಾಜೀವ್‌ ಧವನ್‌ ಅವರು ಇದಕ್ಕೆ ವ್ಯತಿರಿಕ್ತ ನಿಲುವು ವ್ಯಕ್ತಪಡಿಸಿದರು. ಮಧ್ಯಸ್ಥಿಕೆಯನ್ನು ರದ್ದು ಮಾಡಬಾರದು, ಮಧ್ಯಸ್ಥಿಕೆ ಪ್ರಯತ್ನವನ್ನು ಹಾಳುಗೆಡವುವುದೇ ಹೊಸ ಅರ್ಜಿಯ ಉದ್ದೇಶ ಎಂದು ವಾದಿಸಿದರು. 
 
ಮಧ್ಯಸ್ಥಿಕೆ ಸಮಿತಿಯನ್ನು ರಚಿಸಲಾಗಿದೆ. ಹಾಗಾಗಿ, ಅದರ ಇತ್ತೀಚಿನ ಸ್ಥಿತಿಗತಿ ವರದಿಯನ್ನು ಪಡೆದುಕೊಳ್ಳಲೇಬೇಕಿದೆ ಎಂದು ಪೀಠವು ತಿಳಿಸಿತು. ವಿವಾದವನ್ನು ಮಧ್ಯಸ್ಥಿಕೆ ಮೂಲಕ ಪರಿಹರಿಸುವ ಸಾಧ್ಯತೆಯನ್ನು ಪರಿಶೀಲಿಸಲು ಕಲೀಫುಲ್ಲಾ ನೇತೃತ್ವದ ಸಮಿತಿಯನ್ನು ಸುಪ್ರೀಂ ಕೋರ್ಟ್‌ ಮಾರ್ಚ್‌ 8ರಂದು ರಚಿಸಿತ್ತು. ಆರ್ಟ್‌ ಆಫ್‌ ಲಿವಿಂಗ್‌ ಸ್ಥಾಪಕ ಶ್ರೀ ಶ್ರೀ ರವಿಶಂಕರ್‌ ಮತ್ತು ಹಿರಿಯ ವಕೀಲ ಶ್ರೀರಾಮ್‌ ಪಂಚು ಈ ಸಮಿತಿಯ ಸದಸ್ಯರು. ಮಧ್ಯಸ್ಥಿಕೆ ಪ್ರಕ್ರಿಯೆಯು ಫೈಜಾಬಾದ್‌ನಲ್ಲಿ ನಡೆಯಬೇಕು ಮತ್ತು ಪ್ರಕ್ರಿಯೆಯ ವಿವರಗಳನ್ನು ಬಹಿರಂಗಪಡಿಸಬಾರದು ಎಂದು ಪೀಠವು ಸೂಚಿಸಿತ್ತು. ಮಧ್ಯಸ್ಥಿಕೆ ಪ್ರಕ್ರಿಯೆ ಅವಧಿಯನ್ನು ಆ.15ರವರೆಗೆ ಮೇ 10ರಂದು ವಿಸ್ತರಿಸಲಾಗಿತ್ತು.