ಅಯೋಧ್ಯೆ ತೀರ್ಪು: ಸಾಂವಿಧಾನಿಕ ಪೀಠದ ನ್ಯಾಯಮೂರ್ತಿಯೊಬ್ಬರಿಗೆ ಝಡ್ ಸೆಕ್ಯುರಿಟಿ

0
13

ಅಯೋಧ್ಯೆ ತೀರ್ಪನ್ನು ನೀಡಿದ್ದ ಐವರು ಸದಸ್ಯರ ಸಾಂವಿಧಾನಿಕ ಪೀಠದಲ್ಲಿದ್ದ ನ್ಯಾಯಮೂರ್ತಿಗಳ ಪೈಕಿ ಒಬ್ಬರಾಗಿರುವ ಕರ್ನಾಟಕದವರೇ ಆದ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅವರಿಗೆ ಕೇಂದ್ರ ಸರಕಾರ ಝಡ್ ಪ್ಲಸ್ ಭದ್ರತೆಯನ್ನು ಒದಗಿಸಲು ನಿರ್ಧರಿಸಿದೆ.

ನವದೆಹಲಿ: ಅಯೋಧ್ಯೆ ತೀರ್ಪನ್ನು ನೀಡಿದ್ದ ಐವರು ಸದಸ್ಯರ ಸಾಂವಿಧಾನಿಕ ಪೀಠದಲ್ಲಿದ್ದ ನ್ಯಾಯಮೂರ್ತಿಗಳ ಪೈಕಿ ಒಬ್ಬರಾಗಿರುವ ಕರ್ನಾಟಕದವರೇ ಆದ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅವರಿಗೆ ಕೇಂದ್ರ ಸರಕಾರ ಝಡ್ ಪ್ಲಸ್ ಭದ್ರತೆಯನ್ನು ಒದಗಿಸಲು ನಿರ್ಧರಿಸಿದೆ. ನ್ಯಾಯಮೂರ್ತಿ ನಝೀರ್ ಅವರ ಕುಟುಂಬ ಸದಸ್ಯರಿಗೂ ಸಹ ಸೂಕ್ತ ಭದ್ರತೆಯನ್ನು ಒದಗಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಈ ಭದ್ರತೆ ತತ್ ಕ್ಷಣದಿಂದಲೇ ಜಾರಿಗೆ ಬರಲಿದೆ.

ನ್ಯಾಯಮೂರ್ತಿ ನಝೀರ್ ಅವರಿಗೆ ಕೆಲವು ಮೂಲಭೂತ ಸಂಘಟನೆಗಳಿಂದ ಪ್ರಾಣಹಾನಿ ಬೆದರಿಕೆ ಇರುವ ಕಾರಣ ಸರಕಾರ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ತಿಳಿದುಬಂದಿದೆ. ನ್ಯಾಯಮೂರ್ತಿ ಅಬ್ದುಲ್ ನಝೀರ್ ಅವರ ಬೆಂಗಳೂರು ಹಾಗೂ ಮಂಗಳೂರಿನಲ್ಲಿರುವ ಮನೆಗಳಿಗೂ ಸಹ ಕೇಂದ್ರೀಯ ಮೀಸಲು ಪೊಲೀಸ್ ಪಡೆಗಳ ಭದ್ರತೆಯನ್ನು ಒದಗಿಸಲಾಗಿದೆ.

ಜಸ್ಟಿಸ್ ಅಬ್ದುಲ್ ನಝೀರ್ ಮತ್ತು ಕರ್ನಾಟಕ ಹಾಗೂ ದೇಶದ ಇನ್ನಿತರ ಭಾಗಗಳಲ್ಲಿ ಇರುವ  ಅವರ ಕುಟುಂಬ ಸದಸ್ಯರಿಗೆ ತಕ್ಷಣವೇ ಅನ್ವಯವಾಗುವಂತೆ ‘ಝಡ್’ ಭದ್ರತೆಯನ್ನು ಸಂಬಂಧಿತ ಭದ್ರತಾ ಪಡೆಗಳು ಹಾಗೂ ಸ್ಥಳೀಯ ಪೊಲೀಸರು ಒದಗಿಸಲಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.

ನ್ಯಾಯಮೂರ್ತಿ ನಝೀರ್ ಅವರು ಬೆಂಗಳೂರು ಅಥವಾ ಮಂಗಳೂರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಕರ್ನಾಟಕ ಖೋಟಾದಡಿಯಲ್ಲಿ ಅವರಿಗೆ ಈ ಭದ್ರತೆ ಸಿಗಲಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಝಡ್ ವಿಭಾಗದಡಿಯಲ್ಲಿ ಬರುವ ಭದ್ರತೆಯಲ್ಲಿ ಅರೆಸೇನಾಪಡೆ ಹಾಗೂ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ಒಟ್ಟು 22 ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ.

ಅಯೋಧ್ಯೆಯಲ್ಲಿನ ರಾಮಜನ್ಮಭೂಮಿ ವಿವಾದದ ತೀರ್ಪು ಮಾತ್ರವಲ್ಲದೇ, ಜಸ್ಟೀಸ್ ಅಬ್ದುಲ್ ನಝೀರ್ ಅವರು ತ್ರಿವಳಿ ತಲಾಖ್ ಅಸಾಂವಿಧಾನಿಕ ಎಂದು ತೀರ್ಪು ನೀಡಿದ್ದ ಪಂಚ ಸದಸ್ಯ ಪೀಠದಲ್ಲಿದ್ದ ನ್ಯಾಮೂರ್ತಿಗಳಲ್ಲಿ ಒಬ್ಬರಾಗಿದ್ದರು.