ಅಮೆರಿಕ ಬೆದರಿಕೆ ನಡುವೆಯೂ ಭಾರತಕ್ಕೆ ಕ್ಷಿಪಣಿ ಬಲ ನೀಡಲು ಪುಟಿನ್ ಭರವಸೆ

0
6

ನಿಗದಿಯಾದ ಸಮಯ­ದಲ್ಲಿಯೇ ಎಸ್‌-400 ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಭಾರತಕ್ಕೆ ಪೂರೈಸಲಾಗುವುದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭರವಸೆ ನೀಡಿದ್ದಾರೆ.

ಬ್ರೆಸಿಲಿಯಾ: ನಿಗದಿಯಾದ ಸಮಯ­ದಲ್ಲಿಯೇ ಎಸ್‌-400  ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಭಾರತಕ್ಕೆ ಪೂರೈಸಲಾಗುವುದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭರವಸೆ ನೀಡಿದ್ದಾರೆ.
 
ಬ್ರಿಕ್ಸ್‌ ಶೃಂಗಸಭೆಯ ಕೊನೆ ದಿನ ಸುದ್ದಿಗಾರ­ರೊಂದಿಗೆ ಮಾತನಾಡಿದ ಪುಟಿನ್‌ ಈ ವಿಷಯ ತಿಳಿಸಿದರು. ಬ್ರಿಕ್ಸ್‌ ಶೃಂಗದಲ್ಲಿ ನರೇಂದ್ರ ಮೋದಿ-ಪುಟಿನ್‌ ದ್ವಿಪಕ್ಷೀಯ ಸಭೆ ನಡೆಸಿ ಬಾಂಧವ್ಯ ವೃದ್ಧಿಗೆ ಒತ್ತು ನೀಡುವ ಬಗ್ಗೆ ನಿರ್ಧಾರ ಕೈಗೊಂಡರು. 2015ರಲ್ಲಿ ರಷ್ಯಾ ಜತೆಗೆ ಭಾರತ ಎಸ್‌-400 ವ್ಯವಸ್ಥೆ ಖರೀದಿಗೆ ಸುಮಾರು 38 ಸಾವಿರ ಕೋಟಿ ರೂ. ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದಾಗಿನಿಂದ ಅಮೆರಿಕ ವಿರೋಧ ವ್ಯಕ್ತಪಡಿಸು­ತ್ತಿದೆ.
 
ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಸಿದರೆ ಕ್ಯಾಟ್ಸಾ ಕಾನೂನು ಅಡಿಯಲ್ಲಿ ನಿರ್ಬಂಧ ಹೇರುವುದಾ­ಗಿಯೂ ಅಮೆರಿಕ ಬೆದರಿಕೆ ಹಾಕಿದೆ. ಇದಕ್ಕೆ ಭಾರತ ಸೊಪ್ಪು ಹಾಕಿಲ್ಲ. 400 ಕಿ.ಮೀ ದೂರದಿಂದ ಸುಮಾರು 30 ಕಿ.ಮೀ ಎತ್ತರದಲ್ಲಿ ನುಗ್ಗಿ ಬರುತ್ತಿರುವ ಕ್ಷಿಪಣಿಗಳನ್ನು ಗುರುತಿಸಿ ಕೂಡಲೇ ಉಡಾಯಿಸಬಲ್ಲ ಆಧುನಿಕ ರಕ್ಷಣಾ ತಂತ್ರಜ್ಞಾನವನ್ನು ಎಸ್‌-400 ವ್ಯವಸ್ಥೆ ಹೊಂದಿದೆ.