ಅಮೆರಿಕದ ಓಹಾಯೋದಲ್ಲಿ 5ನೇ ವಿಶ್ವ ಕನ್ನಡ ಸಮ್ಮೇಳನ

0
750

ನಾವಿಕ ಸಂಸ್ಥೆಯು ಅಮೆರಿಕದ ಓಹಾಯೋ ರಾಜ್ಯದಲ್ಲಿ 2019 ರ ಆಗಸ್ಟ್. 30 ರಿಂದ ಸೆಪ್ಟಂಬರ್. 1ರವರೆಗೆ ‘5ನೇ ವಿಶ್ವ ಕನ್ನಡ ಸಮ್ಮೇಳನ’ ಆಯೋಜಿಸಿದೆ.

ಬೆಂಗಳೂರು : ನಾವಿಕ ಸಂಸ್ಥೆಯು ಅಮೆರಿಕದ ಓಹಾಯೋ ರಾಜ್ಯದಲ್ಲಿ 2019 ರ ಆಗಸ್ಟ್. 30 ರಿಂದ ಸೆಪ್ಟಂಬರ್. 1ರವರೆಗೆ ‘5ನೇ ವಿಶ್ವ ಕನ್ನಡ ಸಮ್ಮೇಳನ’ ಆಯೋಜಿಸಿದೆ. 

ಓಹಾಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಕನ್ನಡ ಉತ್ಸವದಲ್ಲಿ ವಿಶ್ವದ ನಾನಾ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಕನ್ನಡಿಗರು ಆಗಮಿಸಲಿದ್ದಾರೆ ಎಂದು ಸಮ್ಮೇಳನದ ಮುಖ್ಯಸ್ಥ ಡಾ. ಮನಮೋಹನ್‌ ಕಟ್ಪಾಡಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು. 

”ಕನ್ನಡದ ಉಗಮ, ಸೊಬಗನ್ನು ಪರಿಚಯಿಸುವ ಈ ಉತ್ಸವದಲ್ಲಿ ಕರ್ನಾಟಕ ಸೇರಿದಂತೆ ಭಾರತದ ನಾನಾ ಭಾಗಗಳಿಂದ ಕಲಾವಿದರು, ಕವಿಗಳು, ಉದ್ಯಮಿಗಳು ಸೇರಿದಂತೆ ಹಲವು ವಲಯಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕನ್ನಡ ನಾಟಕಗಳು, ಕವಿ ಗೋಷ್ಠಿಗಳು, ಚಲನ ಚಿತ್ರೋತ್ಸವ, ಭಕ್ತಿ, ಭಾವ, ಜನಪದ ಸೇರಿದಂತೆ ಕನ್ನಡ ಗೀತೆಗಳ ಗಾಯನ, ಸಂಗೀತ ಸಂಜೆ, ಮಹಿಳಾ ಹಕ್ಕು ಮತ್ತು ಸ್ವಾತಂತ್ರ್ಯದ ಕುರಿತ ಗೋಷ್ಠಿಗಳು ನಡೆಯಲಿದ್ದು, ಯುವ ಉದ್ಯಮಿಗಳಿಗೆ ಮಾರ್ಗದರ್ಶನ ನೀಡಲಾಗುವುದು,” ಎಂದರು. 

”ಸಮ್ಮೇಳನಕ್ಕೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್‌, ನಟ ಗಣೇಶ್‌, ಗಾಯಕ ರಾಜೇಶ್‌ ಕೃಷ್ಣನ್‌, ಕಲಾವಿದ ಮುಖ್ಯಮಂತ್ರಿ ಚಂದ್ರು, ನೃತ್ಯ ಕಲಾವಿದರಾದ ನಿರುಪಮ ಮತ್ತು ರಾಜೇಂದ್ರ, ಹಾಸ್ಯ ಕಲಾವಿದರಾದ ಕೃಷ್ಣೇಗೌಡ, ರಿಚರ್ಡ್‌ ಲೂಯಿಸ್‌, ಪ್ರೊ. ಪುತ್ತೂರಾಯ ಮೊದಲಾದವರು ಭಾಗವಹಿಸಲಿದ್ದಾರೆ,” ಎಂದು ಹೇಳಿದರು. 

”ಅಮೆರಿಕದಲ್ಲಿ ಸ್ಥಾಪಿತವಾಗಿರುವ ನಾವಿಕ ಸಂಸ್ಥೆಯು 2010ರಲ್ಲಿ ಲಾಸ್‌ ಏಂಜಲೀಸ್‌ನಲ್ಲಿ, 2013ರಲ್ಲಿ ಬಾಸ್ಟನ್‌ನಲ್ಲಿ, 2015ರಲ್ಲಿ ರಾಲೆ ಹಾಗೂ 2017ರಲ್ಲಿ ಡಲ್ಲಾಸ್‌ನಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಲಾಗಿತ್ತು. ಬೆಂಗಳೂರು ಮತ್ತು ಮೈಸೂರಿನಲ್ಲಿ ನಾವಿಕ ಸಮ್ಮೇಳನ ಹಮ್ಮಿಕೊಂಡು ಬಡ ವಿದ್ಯಾರ್ಥಿಗಳಿಗೆ, ಯುವ ಜನರಿಗೆ ಪೂರಕವಾದ ಕಾರ್ಯಗಳನ್ನು ನಡೆಸಿದೆ,” ಎಂದು ತಿಳಿಸಿದರು.