ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ಜಾಹೀರಾತು ಕಡ್ಡಾಯ : ಭಾರತದ ಚುನಾವಣಾ ಆಯೋಗ

0
421

ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳು ತಮ್ಮ ವಿರುದ್ಧದ ಅಪರಾಧ ಪ್ರಕರಣಗಳ ವೃತ್ತಾಂತವನ್ನು ಮತಯಾಚನೆ ಅವಧಿಯಲ್ಲಿ ಕ್ಷೇತ್ರದ ಮತದಾರರ ಮುಂದೆ ಜಾಹೀರುಗೊಳಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.

ಬೆಂಗಳೂರು: ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳು ತಮ್ಮ ವಿರುದ್ಧದ ಅಪರಾಧ ಪ್ರಕರಣಗಳ ವೃತ್ತಾಂತವನ್ನು ಮತಯಾಚನೆ ಅವಧಿಯಲ್ಲಿ ಕ್ಷೇತ್ರದ ಮತದಾರರ ಮುಂದೆ ಜಾಹೀರುಗೊಳಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.

ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಪ್ರಕಾರ ಆಯೋಗ ಈ ಸೂಚನೆ ನೀಡಿದೆ. ಲೋಕಸಭೆಗೆ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಈ ನಿಯಮ ಜಾರಿಗೆ ಬರುತ್ತಿದೆ.

ಶಿಕ್ಷೆಗೆ ಒಳಗಾದ ಮತ್ತು ವಿಲೇವಾರಿಗೆ ಬಾಕಿ ಇರುವ ಕ್ರಿಮಿನಲ್‌ ಪ್ರಕರಣಗಳ ಮಾಹಿತಿಯನ್ನು ಅಭ್ಯರ್ಥಿ , ನಾಮಪತ್ರ ಹಿಂತೆಗೆದುಕೊಳ್ಳುವ ದಿನದ ನಂತರ, ಮತದಾನ ಆರಂಭವಾಗುವ 24 ಗಂಟೆ ಮೊದಲು ತಾನು ಕಣಕ್ಕಿಳಿದಿರುವ ಕ್ಷೇತ್ರದಲ್ಲಿ ಅತಿ ಹೆಚ್ಚು ಪ್ರಸಾರ ಹೊಂದಿರುವ ಪತ್ರಿಕೆಯಲ್ಲಿ ಮೂರು ಪ್ರತ್ಯೇಕ ದಿನಗಳಲ್ಲಿ ಜಾಹೀರಾತು ನೀಡಬೇಕು. ಹಾಗೆಂದು, ನಾಮ್‌ಕೆವಾಸ್ತೆ ಅಲ್ಲ. ಸೂಕ್ತ ಜಾಗದಲ್ಲಿ ಪ್ರಕಟಿಸಬೇಕು ಮತ್ತು ಜಾಹೀರಾತಿನ ಅಕ್ಷರ ಗಾತ್ರ ಕನಿಷ್ಠ 12 ಇರಬೇಕು ಎಂದೂ ಆಯೋಗ ಸ್ಪಷ್ಟವಾಗಿ ಹೇಳಿದೆ.

ಅಷ್ಟೇ ಅಲ್ಲ, ಅತಿ ಹೆಚ್ಚು ವೀಕ್ಷಕರನ್ನು ಹೊಂದಿರುವ ಸುದ್ದಿವಾಹಿನಿಯೊಂದರಲ್ಲೂ ಮತದಾನ ಅಂತ್ಯವಾಗಲು 48
ಗಂಟೆ ಮೊದಲು ಮೂರು ಪ್ರತ್ಯೇಕ ದಿನಗಳಲ್ಲಿ ಪ್ರಚಾರಪಡಿಸಬೇಕು. ಬಳಿಕ, ಈ ಬಗ್ಗೆ ಜಿಲ್ಲಾ ಚುನಾವಣಾ ಅಧಿಕಾರಿಗೆ ದೃಢೀಕರಣ ಸಲ್ಲಿಸಬೇಕು.

ಕಣಕ್ಕಿಳಿಯುವವರ ಬಗ್ಗೆ ಆಯಾ ಪಕ್ಷಗಳು ಕೂಡಾ ತನ್ನ ಅಭ್ಯರ್ಥಿಗಳ ಅಪರಾಧ ಪ್ರಕರಣಗಳ ಹಿನ್ನೆಲೆಗಳ ಮಾಹಿತಿಯನ್ನು ಜಾಹೀರಾತುಗಳ ಮೂಲಕ ಮತದಾರರ ಮುಂದೆ ಬಿಚ್ಚಿಡಬೇಕು ಎಂದೂ ಆಯೋಗ ಸೂಚಿಸಿದೆ. ಪಕ್ಷಗಳು ತಮ್ಮ ಸಾಮಾಜಿಕ ತಾಣಗಳ ಮೂಲಕವೂ ಮತದಾರರಿಗೆ ಈ ಬಗ್ಗೆ ಮಾಹಿತಿ ನೀಡಬೇಕು. 

ಆಯೋಗದ ಸೂಚನೆಗಳನ್ನು ಪಾಲಿಸಿರುವ ಬಗ್ಗೆ ಚುನಾವಣೆ ಮುಗಿದ 30 ದಿನಗಳ ಒಳಗೆ ಪತ್ರಿಕೆಗಳ ಮತ್ತು ಸುದ್ದಿ ವಾಹಿನಿಗಳಲ್ಲಿ ಪ್ರಚುರಪಡಿಸಿದ ಜಾಹೀರಾತು ತುಣುಕುಗಳ ಸಹಿತ ಎಲ್ಲ ರಾಜಕೀಯ ಪಕ್ಷಗಳು ಮುಖ್ಯ ಚುನಾವಣಾಧಿಕಾರಿಗೆ ವರದಿ ಸಲ್ಲಿಸಬೇಕು. ಅದಾದ 15 ದಿನಗಳ ಬಳಿಕ ಪಕ್ಷಗಳು ನೀಡಿದ ವರದಿ ಮತ್ತು ಈ ವಿಷಯದಲ್ಲಿ ಲೋಪಗಳಾಗಿದ್ದರೆ ಆ ಕುರಿತು ಕೇಂದ್ರ ಚುನಾವಣಾ ಆಯೋಗಕ್ಕೆ ಮುಖ್ಯ ಚುನಾವಣಾಧಿಕಾರಿ ಸಮಗ್ರ ಮಾಹಿತಿ ನೀಡಬೇಕು.

ಜಾಹೀರಾತು ನೀಡದ ಅಭ್ಯರ್ಥಿಗಳು ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾಗುತ್ತದೆ. ಅಲ್ಲದೆ, ಜಾಹೀರಾತು ನೀಡದಿದ್ದರೆ ಅಥವಾ ತಪ್ಪು ಮಾಹಿತಿ ಬಗ್ಗೆ ಪ್ರತಿಸ್ಪರ್ಧಿ ದೂರು ನೀಡಿದರೆ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ ಎಂದು ಆಯೋಗದ ಮೂಲಗಳು ಹೇಳಿವೆ.

ಪಕ್ಷಗಳು ಮತ್ತು ಅಭ್ಯರ್ಥಿಗಳು ಪ್ರಕಟಿಸುವ ಜಾಹೀರಾತಿನ ವೆಚ್ಚವನ್ನು ಅಭ್ಯರ್ಥಿಗಳ ಚುನಾವಣಾ ವೆಚ್ಚದ ಭಾಗವಾಗಿ ಪರಿಗಣಿಸಲಾಗುವುದು.ಯಾವುದೇ ಪ್ರಕರಣ ಇಲ್ಲದ ಅಭ್ಯರ್ಥಿಗಳು ಜಾಹೀರಾತು ಪ್ರಕಟಿಸುವ ಅಗತ್ಯ ಇಲ್ಲ ಎಂದೂ ಆಯೋಗ ಸ್ಪಷ್ಟಪಡಿಸಿದೆ.

ಪ್ರತಿಜ್ಞಾವಿಧಿಯೂ ಕಡ್ಡಾಯ: ಅಭ್ಯರ್ಥಿಗಳು ಇನ್ನು ಮುಂದೆ, ದಂಡಾಧಿಕಾರಿಗಳ ಮುಂದೆ ತಾವು ಸಲ್ಲಿಸುವ ಪ್ರಮಾಣಪತ್ರದ ಬಗ್ಗೆ ಪ್ರತಿಜ್ಞಾವಿಧಿ ಸ್ವೀಕರಿಸುವುದನ್ನೂ ಕಡ್ಡಾಯಗೊಳಿಸಲಾಗಿದೆ.