ಅಫ್ಘಾನಿಸ್ತಾನದಲ್ಲಿ ಆರ್ಥಿಕ ಯೋಜನೆ: ಮೋದಿ–ಜಿನ್‌ಪಿಂಗ್‌ ಸಮ್ಮತಿ

0
17

ಯುದ್ಧ ಮತ್ತು ದಾಳಿಗಳಿಂದ ನಲುಗಿರುವ ಅಫ್ಘಾನಿಸ್ತಾನದಲ್ಲಿ ಜಂಟಿ ಆರ್ಥಿಕ ಯೋಜನೆ ಕಾರ್ಯಗತಗೊಳಿಸಲು ಇದೇ ಮೊದಲ ಬಾರಿಗೆ ಭಾರತ ಮತ್ತು ಚೀನಾ ಸಮ್ಮತಿಸಿವೆ.

ವುಹಾನ್‌: ಯುದ್ಧ ಮತ್ತು ದಾಳಿಗಳಿಂದ ನಲುಗಿರುವ ಅಫ್ಘಾನಿಸ್ತಾನದಲ್ಲಿ ಜಂಟಿ ಆರ್ಥಿಕ ಯೋಜನೆ ಕಾರ್ಯಗತಗೊಳಿಸಲು ಇದೇ ಮೊದಲ ಬಾರಿಗೆ ಭಾರತ ಮತ್ತು ಚೀನಾ ಸಮ್ಮತಿಸಿವೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ನಡುವಣ ನಡೆದ ಎರಡು ದಿನಗಳ ಅನೌಪಚಾರಿಕ ಮಾತುಕತೆಯಲ್ಲಿ 2018 ಏಪ್ರೀಲ್ 28 ರ ಶನಿವಾರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಅಫ್ಘಾನಿಸ್ತಾನ ಹಾಗೂ ಅಲ್ಲಿನ ಜನರ ಅಭಿವೃದ್ಧಿಗಾಗಿ ಜಂಟಿ ಯೋಜನೆ ರೂಪಿಸಲು ಉಭಯ ರಾಷ್ಟ್ರಗಳು ಮುಂದಾಗಿವೆ. ಮೂರನೇ ರಾಷ್ಟ್ರವೊಂದರ ಅಭಿವೃದ್ಧಿಗಾಗಿ ಭಾರತ–ಚೀನಾ ಯೋಜನೆ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ.

ಆರ್ಥಿಕ ಯೋಜನೆಯ ರೂಪುರೇಷೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಅಫ್ಘಾನಿಸ್ತಾನದ ಹೆದ್ದಾರಿಗಳು ಹಾಗೂ ಜಲಾಶಯಗಳ ನಿರ್ಮಾಣ ಮತ್ತು ಪುನಶ್ಚೇತನ ಕಾರ್ಯಗಳಿಗಾಗಿ ಭಾರತ ಈ ಹಿಂದೆ ಕೋಟ್ಯಾಂತರ ಡಾಲರ್‌ ಸಹಕಾರ ನೀಡಿದೆ. ಇನ್ನೂ ಚೀನಾ ಬೀಜಿಂಗ್‌ನ ಭದ್ರತೆಯ ದೃಷ್ಟಿಯಿಂದ ಅಫ್ಘಾನ್‌ ಮೂಲದ ಅಲ್‌–ಕೈದಾ ಮತ್ತು ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆಗಳ ನಿಯಂತ್ರಣ ಅಗತ್ಯವಾಗಿದೆ.

ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಶಾಂತಿ ಮಾತುಕತೆ ಸೇರಿ ಯಾವುದೇ ಪ್ರಕ್ರಿಯೆಯಲ್ಲಿ ಮುಂದಾಳತ್ವ ವಹಿಸುವ ಪಾಕಿಸ್ತಾನವು ಭಾರತ ಪಾಲ್ಗೊಳ್ಳುವಿಕೆಯನ್ನು ಈವರೆಗೂ ವಿರೋಧಿಸುತ್ತಲೇ ಇದೆ.

ತಾಲಿಬಾನ್‌ ಸಂಘಟನೆ ಮುಖಂಡರೊಂದಿಗೆ ಶಾಂತಿ ಮಾತುಕತೆ ನಡೆಸುವ ಚೀನಾ–ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ–ಅಮೆರಿಕದ ಪ್ರಯತ್ನಗಳು ಈವರೆಗೂ ಕೈಗೂಡಿಲ್ಲ.

‘ವಿವಿಧ ಕ್ಷೇತ್ರಗಳಲ್ಲಿ ಭಾರತ–ಚೀನಾ ಸಹಕಾರದ ಕುರಿತು ಮಾತುಕತೆ ಆಗಿದೆ. ಉಭಯ ರಾಷ್ಟ್ರಗಳ ಜನರ ನಡುವಿನ ಸಂಬಂಧ ಹಾಗೂ ಆರ್ಥಿಕ ವಲಯದ ಸಹಕಾರಗಳ ಚರ್ಚೆ ನಡೆಯಿತು. ಇದರೊಂದಿಗೆ ಕೃಷಿ, ತಂತ್ರಜ್ಞಾನ, ಇಂಧನ ಹಾಗೂ ಪ್ರವಾಸೋದ್ಯಮದ ಬಗ್ಗೆಯೂ ಮಾತನಾಡಿದೆವು’ ಎಂದು ಪ್ರಧಾನಿ ಮೋದಿ ಟ್ವೀಟಿಸಿದ್ದಾರೆ.