ಅಪಾಚೆ, ಚಿನೂಕ್‌ ಕಾಪ್ಟರ್‌ ಮುಂದಿನ ವರ್ಷ ಭಾರತಕ್ಕೆ ಹಸ್ತಾಂತರ : ಬೋಯಿಂಗ್

0
52

ಅಪಾಚೆ ಮತ್ತು ಚಿನೂಕ್‌ ಮಿಲಿಟರಿ ಹೆಲಿಕಾಪ್ಟರ್‌ಗಳ ಚೊಚ್ಚಲ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಮುಂದಿನ ವರ್ಷ ಭಾರತಕ್ಕೆ ಪೂರೈಸಲಾಗುವುದು ಎಂದು ಅಮೆರಿಕದ ವೈಮಾನಿಕ ದೈತ್ಯ ಸಂಸ್ಥೆ ಬೋಯಿಂಗ್‌ ತಿಳಿಸಿದೆ.

ಹೊಸದಿಲ್ಲಿ:  ಅಪಾಚೆ ಮತ್ತು ಚಿನೂಕ್‌ ಮಿಲಿಟರಿ ಹೆಲಿಕಾಪ್ಟರ್‌ಗಳ ಚೊಚ್ಚಲ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಮುಂದಿನ ವರ್ಷ ಭಾರತಕ್ಕೆ ಪೂರೈಸಲಾಗುವುದು ಎಂದು ಅಮೆರಿಕದ ವೈಮಾನಿಕ ದೈತ್ಯ ಸಂಸ್ಥೆ ಬೋಯಿಂಗ್‌ ತಿಳಿಸಿದೆ. 

ಭಾರತವು ಬೋಯಿಂಗ್‌ನಿಂದ 22 ಅಪಾಚೆ ಮಿಲಿಟರಿ ಹೆಲಿಕಾಪ್ಟರ್‌ಗಳು ಮತ್ತು 15 ಚಿನೂಕ್‌ ಹೆವಿ ಲಿಫ್ಟ್‌ ಕಾಪ್ಟರ್‌ಗಳನ್ನು ಖರೀದಿಸುತ್ತಿದೆ. 

ಈ ಕುರಿತು ಮಾಹಿತಿ ನೀಡಿದ ಬೋಯಿಂಗ್‌ ಇಂಡಿಯಾ ಅಧ್ಯಕ್ಷ ಪ್ರತೂಶ್‌ ಕುಮಾರ್‌, ”ಭಾರತೀಯ ಸಶಸ್ತ್ರ ಪಡೆಗಳ ಸಾಮರ್ಥ್ಯ‌ವನ್ನು ಬಲಪಡಿಸುವ ಕಡೆಗೆ ಅಪಾಚೆ ಮತ್ತು ಚಿನೂಕ್‌ ಹೆಲಿಕಾಪ್ಟರ್‌ಗಳು ಪ್ರಮುಖ ಮೈಲಿಗಲ್ಲುಗಳಾಗಿವೆ. ಭಾರತವು ಎಎಚ್‌-64ಇ ಅಪಾಚೆ ಮತ್ತು ಸಿಎಚ್‌-47ಎಫ್‌ ಚಿನೂಕ್‌ ಹೆಲಿಕಾಪ್ಟರ್‌ಗಳ ಅತ್ಯಂತ ಮುಂದುವರಿದ ಆವೃತ್ತಿಗಳನ್ನು ಸ್ವೀಕರಿಸಲಿದೆ,” ಎಂದು ತಿಳಿಸಿದರು. 

ಸೆಪ್ಟೆಂಬರ್‌ 2016ರಲ್ಲಿ ಭಾರತೀಯ ವಾಯುಪಡೆಗಾಗಿ 22 ಅಪಾಚೆ ಮತ್ತು 15 ಚಿನೂಕ್‌ ಹೆಲಿಕಾಪ್ಟರ್‌ ಖರೀದಿ ಒಪ್ಪಂದವನ್ನು ಭಾರತ ಅಂತಿಮಗೊಳಿಸಿತ್ತು. ಇದು 4,168 ಕೋಟಿ ರೂ. ಖರೀದಿ ಒಪ್ಪಂದ. 

ಅಪಾಚೆ ವಿಶೇಷ: ಎಎಚ್‌-64ಇ ಅಪಾಚೆ ಜಾಗತಿಕ ಮಟ್ಟದಲ್ಲಿ ಬಹು ಉದ್ದೇಶಿತ ಪ್ರಮುಖ ಮಿಲಿಟರಿ ಹೆಲಿಕಾಪ್ಟರ್‌. ಜಂಟಿ ಡಿಜಿಟಲ್‌ ನಿರ್ವಹಣಾ ವ್ಯವಸ್ಥೆಯೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಹೊಂದಿದೆ. 

ಚಿನೂಕ್‌ ವಿಶೇಷ:
 
ಇದು ಕೂಡ ಬಹು ಉದ್ದೇಶಿತ ಯುದ್ಧ ಹೆಲಿಕಾಪ್ಟರ್‌ ಆಗಿದ್ದು, ಇದನ್ನು ಸೇನಾ ಪಡೆಯ ಸಾಗಣೆ, ಫಿರಂಗಿಗಳು, ಉಪಕರಣಗಳು ಮತ್ತು ಇಂಧನ ಸಾಗಿಸಲು ಬಳಸಲಾಗುತ್ತದೆ. ವಿಪತ್ತು ಪರಿಹಾರ ಕಾರ್ಯಗಳ ಸಂದರ್ಭದಲ್ಲೂ ಬಳಕೆಯಾಗುತ್ತದೆ. 

ಮಾನವ ರಹಿತ ಸಬ್‌ಮರಿನ್‌ 

ಸಮುದ್ರದಾಳದಲ್ಲಿ ಶತ್ರು ರಾಷ್ಟ್ರಗಳ ಜಲಾಂತಗಾರ್ಮಿಗಳ ಚಲನವಲನ ಮತ್ತೆ ಮಾಡಿ ಅವುಗಳ ಮೇಲೆ ದಾಳಿ ನಡೆಸಬಲ್ಲ ಡ್ರೋನ್‌ ಅಥವಾ ಮಾನವ ರಹಿತ ಜಲಾಂತರ್ಗಾಮಿಗಳನ್ನು ಭಾರತ ತನ್ನ ನೌಕಾಪಡೆಯ ಬತ್ತಳಕೆಯಲ್ಲಿ ಹೊಂದಲಿದೆ. ಪ್ಯಾಸಿವ್‌ ಸೋನಾರ್‌ ಸಾಧನ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆಯೊಂದಿಗೆ ಕನಿಷ್ಠ ಸತತ 15 ದಿನಗಳ ಕಾಲ ಗಂಟೆಗೆ 3 ನಾಟ್‌ ವೇಗದೊಂದಿಗೆ ಸಂಚರಿಸಬಲ್ಲ ಮಾನವ ರಹಿತ 12 ಮಿನಿ ಸಬ್‌ಮರಿನ್‌ಗಳನ್ನು ಹೊಂದಲು ಭಾರತ ಉತ್ಸುಕವಾಗಿದ್ದು, ಈ ಸಂಬಂಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೆಂಡರ್‌ ಕರೆದಿದೆ. 2021ರ ಹೊತ್ತಿಗೆ ಇವು ಭಾರತ ಸೇರಲಿವೆ ಎಂದು ಮೂಲಗಳು ಹೇಳಿವೆ.