ಅಪರೂಪದ ಪುರಾತನ ಕಪ್ಪೆ ಪ್ರಭೇದ (ಕೇರಳ: ಕುರಿಚಿಯಾರ್‌ಮಲ ಬೆಟ್ಟದ ಶೋಲಾ ಕಾಡಿನಲ್ಲಿ ಪತ್ತೆ)

0
23

ಕೇರಳದ ಕುರಿಚಿಯಾರ್‌ಮಲ ಬೆಟ್ಟ ವ್ಯಾಪ್ತಿಯ ಶೋಲಾ ಕಾಡಿನಲ್ಲಿ ಅಪರೂಪದ ಕಪ್ಪೆ ಪ್ರಭೇದವೊಂದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ಚಿಕ್ಕಮಗಳೂರು: ಕೇರಳದ ಕುರಿಚಿಯಾರ್‌ಮಲ ಬೆಟ್ಟ ವ್ಯಾಪ್ತಿಯ ಶೋಲಾ ಕಾಡಿನಲ್ಲಿ ಅಪರೂಪದ ಕಪ್ಪೆ ಪ್ರಭೇದವೊಂದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮತ್ತು ಭಾರತೀಯ ಪ್ರಾಣಿ ಸರ್ವೇಕ್ಷಣಾಲಯದ ವಿಜ್ಞಾನಿಗಳ ತಂಡವು ಈ ಕಪ್ಪೆಯನ್ನು 2010ರಲ್ಲೇ ಪತ್ತೆ ಹಚ್ಚಿತ್ತು. ಆದರೆ, ಕಪ್ಪೆಯ ವಿಶಿಷ್ಟ ದೇಹ ವಿನ್ಯಾಸ, ಬಣ್ಣ, ಸಂಕೀರ್ಣ ವಿಕಸನ ಮೂಲಗಳಿಂದಾಗಿ ಪ್ರಭೇದ ಘೋಷಣೆ ವಿಳಂಬವಾಗಿದೆ.

 ‘ಈ ಕಪ್ಪೆಯ ಹೊಟ್ಟೆ ಭಾಗದ ಕಡು ಕಿತ್ತಳೆ ಬಣ್ಣವು ಮಧ್ಯ ಆಫ್ರಿಕಾದ ಲೆಪ್ಟೊಡಕ್ಸಿಲೋಡಾನ್‌ ಬೌಲೇಂಜರಿ ಪ್ರಭೇದವನ್ನು ಹೋಲುತ್ತಿದೆ. ಆದರೆ, ಆನುವಂಶಿಕವಾಗಿ ಪಶ್ಚಿಮಘಟ್ಟದ ನೀಯ್ಕ್ಸಿ ಬಟ್ರಾಕಸ್‌ ಹಾಗೂ ಶ್ರೀಲಂಕಾದ ಲಂಕನೆಕ್ಟ್ಸ್‌ ಪ್ರಭೇದದ ಕಪ್ಪೆಗಳನ್ನು ಹೋಲುತ್ತಿದೆ. ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯಬೇಕಿದೆ’ ಎಂದು ಅಧ್ಯಯನ ತಂಡದಲ್ಲಿದ್ದ ಚಿಕ್ಕಮಗಳೂರು ತಾಲ್ಲೂಕಿನ ಕಬ್ಬಿನಹಳ್ಳಿಯ ವಿಜ್ಞಾನಿ ಡಾ.ಕೆ.ಪಿ. ದಿನೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಪ್ಪೆಯ ಕಣ್ಣುಗಳು ಮತ್ತು ದೇಹದಲ್ಲಿ ನಕ್ಷತ್ರ ಪುಂಜ ಹೋಲುವ ಗುರುತುಗಳು ಇರುವುದರಿಂದ, ವಯನಾಡಿನ ಕುರಿಚಿಯ ಬುಡಕಟ್ಟು ಸಮುದಾಯದ ಗೌರವಾರ್ಥ ‘ಆಸ್ಟ್ರೋಬಟ್ರಾಕಸ್‌ ಕುರಿಚಿಯಾನಾ’ ಎಂದು ನಾಮಕರಣ ಮಾಡಲಾಗಿದೆ’ ಎಂದು ಅವರು ಹೇಳಿದರು.