ಅನಿಲ್‌ ಅಂಬಾನಿಗೆ ಸಾವಿರ ಕೋಟಿ ತೆರಿಗೆ ವಿನಾಯಿತಿ

0
338

ಅನಿಲ ಅಂಬಾನಿ ಮಾಲೀಕತ್ವದ ಕಂಪನಿಗೆ ಫ್ರಾನ್ಸ್‌ ಸರ್ಕಾರ 143.7 ಮಿಲಿಯನ್‌ ಯುರೊ (₹1124.9 ಕೋಟಿ) ತೆರಿಗೆ ವಿನಾಯಿತಿ ನೀಡಿರುವುದಾಗಿ ವರದಿಯಾಗಿದೆ.

ನವದೆಹಲಿ: ಅನಿಲ ಅಂಬಾನಿ ಮಾಲೀಕತ್ವದ ಕಂಪನಿಗೆ ಫ್ರಾನ್ಸ್‌ ಸರ್ಕಾರ 143.7 ಮಿಲಿಯನ್‌ ಯುರೊ (1124.9 ಕೋಟಿ) ತೆರಿಗೆ ವಿನಾಯಿತಿ ನೀಡಿರುವುದಾಗಿ ವರದಿಯಾಗಿದೆ.

ಫ್ರಾನ್ಸ್‌ನಲ್ಲಿರುವ ಅನಿಲ್‌ ಅಂಬಾನಿ ಅವರ ‘ರಿಲಯನ್ಸ್‌ ಫ್ಲ್ಯಾಗ್‌ ಅಟ್ಲಾಂಟಿಕ್‌ ಫ್ರಾನ್ಸ್‌ ಎಸ್‌ಎಎಸ್‌’ ಕಂಪನಿಗೆ ಅಲ್ಲಿನ ಸರ್ಕಾರ 2015ರಲ್ಲಿ ಅಪಾರ ಮೊತ್ತದ ತೆರಿಗೆ ವಿನಾಯಿತಿ ನೀಡಿದೆ ಎಂದು ಫ್ರಾನ್ಸ್‌ನ ‘ಲೆ ಮಾಂಡೆ’ ದಿನಪತ್ರಿಕೆ ವರದಿ ಮಾಡಿದೆ.

ಈ ಕಂಪನಿಯ ಮಾಲೀಕತ್ವ ಹೊಂದಿರುವ ರಿಲಯನ್ಸ್‌ ಕಮ್ಯೂನಿಕೇಷನ್‌, ‘ಲೆ ಮಾಂಡೆ’ ವರದಿಯನ್ನು ತಳ್ಳಿ ಹಾಕಿದೆ. ಫ್ರಾನ್ಸ್‌ನಲ್ಲಿ ಕೇಬಲ್‌ ನೆಟ್‌ವರ್ಕ್‌ ಮತ್ತು ಇತರ ದೂರಸಂಪರ್ಕ ಮೂಲಸೌಕರ್ಯಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಈ ಕಂಪನಿ ಕೈಗೊಳ್ಳುತ್ತಿದೆ.

ತೆರಿಗೆ ಬಾಕಿ ಉಳಿಸಿಕೊಂಡಿದ್ದ ’ರಿಲಯನ್ಸ್‌ ಫ್ಲ್ಯಾಗ್‌ ಅಟ್ಲಾಂಟಿಕ್‌ ಫ್ರಾನ್ಸ್‌ ಎಸ್‌ಎಎಸ್‌’ಗೆ ತೆರಿಗೆ ಇಲಾಖೆ ಅಧಿಕಾರಿಗಳು 151 ಮಿಲಿಯನ್‌ ಯುರೊ ಪಾವತಿಸುವಂತೆ ಸೂಚಿಸಿದ್ದರು. ಆದರೆ, ರಫೇಲ್‌ ಒಪ್ಪಂದ ಕೈಗೊಳ್ಳುವುದು ಖಚಿತವಾದ ಬಳಿಕ, ವಿನಾಯಿತಿ ನೀಡಲು ಮುಂದಾದ ಅಧಿಕಾರಿಗಳು ಕೇವಲ 7.3 ಮಿಲಿಯನ್‌ ಯುರೊ (57.15 ಕೋಟಿ) ಪಡೆಯಲು ಒಪ್ಪಿಕೊಂಡರು ಎಂದು ವರದಿ ತಿಳಿಸಿದೆ.

ಡಾಸೊ ಕಂಪನಿಯಿಂದ 36 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ ಆರು ತಿಂಗಳ ಬಳಿಕ ಈ ವಿನಾಯಿತಿ ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಪ್ಯಾರಿಸ್‌ನಲ್ಲಿ 2015ರ ಏಪ್ರಿಲ್‌ 10ರಂದು ಅಂದಿನ ಫ್ರಾನ್ಸ್‌ ಅಧ್ಯಕ್ಷ ಫ್ರಾಂಕೊಯಿಸ್‌ ಒಲಾಂಡೆ, ಪ್ರಧಾನಿ ನರೇಂದ್ರ ಮೋದಿ ಜತೆ ಮಾತುಕತೆ ನಡೆಸಿದ ಬಳಿಕ ರಫೇಲ್‌ ವಿಮಾನ ಖರೀದಿಸುವುದಾಗಿ ಪ್ರಕಟಿಸಲಾಗಿತ್ತು. 2016ರ ಸೆಪ್ಟೆಂಬರ್‌ 23ರಂದು ಅಂತಿಮ ಒಪ್ಪಂದ 
ಮಾಡಿಕೊಳ್ಳಲಾಗಿತ್ತು.

ಫ್ರಾನ್ಸ್‌ ತೆರಿಗೆ ಅಧಿಕಾರಿಗಳು ಕಂಪನಿಯನ್ನು ತನಿಖೆಗೆ ಒಳಪಡಿಸಿದಾಗ 2007ರಿಂದ 2010ರ ಅವಧಿಯಲ್ಲಿ 60 ಮಿಲಿಯನ್‌ ಯುರೊ 
(469.72 ಕೋಟಿ) ಬಾಕಿ ಪಾವತಿಸದಿರುವುದು ಪತ್ತೆಯಾಗಿತ್ತು. ಆದರೆ, ರಿಲಯನ್ಸ್ ಕಂಪನಿ 7.6 ಮಿಲಿಯನ್‌ ಯುರೊ (59.498 ಕೋಟಿ) ಪಾವತಿಸಿ ಬಾಕಿ ಇತ್ಯರ್ಥಗೊಳಿಸುವುದಾಗಿ ತಿಳಿಸಿದಾಗ ಫ್ರಾನ್ಸ್‌ ತೆರಿಗೆ ಅಧಿಕಾರಿಗಳು ನಿರಾಕರಿಸಿದರು.

ತೆರಿಗೆ ಅಧಿಕಾರಿಗಳು 2010–2012ರ ಅವಧಿಯಲ್ಲಿನ ತೆರಿಗೆ ಬಗ್ಗೆಯೂ ಪರಿಶೀಲನೆ ನಡೆಸಿದಾಗ ಹೆಚ್ಚುವರಿಯಾಗಿ 91 ಮಿಲಿಯನ್‌ ಯುರೊ (712.41 ಕೋಟಿ) ತೆರಿಗೆ ಪಾವತಿಸುವಂತೆ ಸೂಚಿಸಿದರು. ಒಟ್ಟಾರೆಯಾಗಿ 2015ರ ಏಪ್ರಿಲ್‌ಗೆ 151 ಮಿಲಿಯನ್‌ ಯುರೊ ತೆರಿಗೆಯನ್ನು ಫ್ರಾನ್ಸ್‌ ಅಧಿಕಾರಿಗಳಿಗೆ ರಿಲಯನ್ಸ್‌ ಕಂಪನಿ ನೀಡಬೇಕಾಗಿತ್ತು. ರಫೇಲ್‌ ಒಪ್ಪಂದ ಘೋಷಿಸಿ ಆರು ತಿಂಗಳ ಬಳಿಕ 7.3 ಮಿಲಿಯನ್‌ ಯುರೊ ಸ್ವೀಕರಿಸಲು ಅಧಿಕಾರಿಗಳು ಒಪ್ಪಿಕೊಂಡರು ಎಂದು ವರದಿ ತಿಳಿಸಿದೆ.

2008–2012ರ ಅವಧಿಯನ್ನು ಫ್ರಾನ್ಸ್‌ನ ತೆರಿಗೆ ಅಧಿಕಾರಿಗಳು ಪರಿಶೀಲಿಸಿದಾಗ ಫ್ಲ್ಯಾಗ್‌ ಫ್ರಾನ್ಸ್‌ಗೆ 20 ಕೋಟಿ ನಷ್ಟವಾಗಿತ್ತು. ಇದೇ ಅವಧಿಯಲ್ಲಿ ತೆರಿಗೆ ಅಧಿಕಾರಿಗಳು 1100 ಕೋಟಿ ಪಾವತಿಸುವಂತೆಯೂ ಸೂಚಿಸಿದ್ದರು.

 ‘2015ರ ಫೆಬ್ರುವರಿ ಮತ್ತು ಅಕ್ಟೋಬರ್‌ ನಡುವಣ ಅವಧಿಯಲ್ಲಿ ರಫೇಲ್‌ ಒಪ್ಪಂದ ಕುರಿತು ಭಾರತದ ಜತೆ ಫ್ರಾನ್ಸ್‌ ಮಾತುಕತೆ ನಡೆಸುತ್ತಿದ್ದಾಗ ಅನಿಲ ಅಂಬಾನಿ 143.7 ಮಿಲಿಯನ್‌ ಯುರೊ ತೆರಿಗೆ ವಿನಾಯಿತಿ ಪಡೆದಿದೆ’ ಎಂದು ವರದಿ ಬರೆದಿರುವ ಜುಲಿಯನ್‌ ಬೌಯಿಸ್ಸೌಯು ಟ್ವೀಟ್‌ ಮಾಡಿದ್ದಾರೆ. ಆ್ಯನೆ ಮಿಶೆಲ್‌ ಜತೆ ಜೂಲಿಯನ್‌ ವರದಿ ಬರೆದಿದ್ದಾರೆ.

‘ಹಸ್ತಕ್ಷೇಪ ಮಾಡಿಲ್ಲ’

ನವದೆಹಲಿ (ಪಿಟಿಐ): ಅನಿಲ ಅಂಬಾನಿ ಅವರ ಕಂಪನಿಗೆ ತೆರಿಗೆ ವಿನಾಯಿತಿ ನೀಡಿರುವುದಕ್ಕೆ ಸಂಬಂಧಿಸಿ ಯಾವುದೇ ರೀತಿ ರಾಜಕೀಯ ಹಸ್ತಕ್ಷೇಪ ಮಾಡಿಲ್ಲ ಎಂದು ಫ್ರಾನ್ಸ್‌ ಸರ್ಕಾರ ಸ್ಪಷ್ಟಪಡಿಸಿದೆ. 2008 ಮತ್ತು 2012ರ ನಡುವಣ ತೆರಿಗೆ ವಿವಾದವನ್ನು ತೆರಿಗೆ ಇಲಾಖೆ ಅಧಿಕಾರಿಗಳು ಮತ್ತು ರಿಲಯನ್ಸ್‌ ಕಂಪನಿ ಇತ್ಯರ್ಥ ಮಾಡಿಕೊಂಡಿವೆ ಎಂದು ತಿಳಿಸಿದೆ.