ಅತಿಯಾದ ಮನವಿ:‌ ವಿರಾಟ್‌ ಕೊಹ್ಲಿಗೆ ದಂಡ

0
12

ಅಫ್ಗಾನಿಸ್ತಾನ ವಿರುದ್ಧ ಪಂದ್ಯದ ವೇಳೆ ‘ಅತಿಯಾಗಿ ಮನವಿ’ ಸಲ್ಲಿಸಿದ್ದಕ್ಕಾಗಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರಿಗೆ ಪಂದ್ಯ ಸಂಭಾವನೆಯ ಶೇ 25ರಷ್ಟನ್ನು ದಂಡವಾಗಿ ವಿಧಿಸಲಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಪ್ರಕಟಿಸಿದೆ.

ಸೌತಾಂಪ್ಟನ್‌, ಇಂಗ್ಲೆಂಡ್‌: ಅಫ್ಗಾನಿಸ್ತಾನ ವಿರುದ್ಧ ಪಂದ್ಯದ ವೇಳೆ ‘ಅತಿಯಾಗಿ ಮನವಿ’ ಸಲ್ಲಿಸಿದ್ದಕ್ಕಾಗಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರಿಗೆ ಪಂದ್ಯ ಸಂಭಾವನೆಯ ಶೇ 25ರಷ್ಟನ್ನು ದಂಡವಾಗಿ ವಿಧಿಸಲಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಪ್ರಕಟಿಸಿದೆ.

ಅಫ್ಗಾನಿಸ್ತಾನ, ಜೂನ್ 22 ರ ಶನಿವಾರ ನಡೆದ ಪಂದ್ಯದಲ್ಲಿ ದಿಟ್ಟ ಹೋರಾಟದ ಮೂಲಕ ಭಾರತಕ್ಕೆ ತಲೆನೋವು ತಂದಿತ್ತು. ಭಾರತವನ್ನು 224 ರನ್ನಿಗೆ (8 ವಿಕೆಟ್‌ಗೆ) ನಿಯಂತ್ರಿಸಿದ ನಂತರ ಅಫ್ಗಾನಿಸ್ತಾನ ಅಚ್ಚರಿಯ ಫಲಿತಾಂಶ ನೀಡುವತ್ತ ಹೆಜ್ಜೆಯಟ್ಟಿತ್ತು. ಆದರೆ ಕೊನೆಗಳಿಗೆಯಲ್ಲಿ ಶಮಿ ದಾಳಿಗೆ ಕುಸಿದು 11 ರನ್‌ಗಳಿಂದ ಸೋತಿತ್ತು.

ಜೂನ್ 22 ರ ಶನಿವಾರ, ಅಫ್ಗಾನಿಸ್ತಾನ ಬ್ಯಾಟ್‌ ಮಾಡುತ್ತಿದ್ದಾಗ 29ನೇ ಓವರ್‌ ವೇಳೆ ಬೂಮ್ರಾ ಎಸೆತದಲ್ಲಿ ರಹಮತ್‌ ಶಾ ಅವರ ಪ್ಯಾಡ್‌ಗೆ ಚೆಂಡು ಬಡಿದಿತ್ತು. ಎಲ್‌ಬಿ ಈ ಮನವಿಯನ್ನು ತಿರಸ್ಕರಿಸಿದಾಗ ಕೊಹ್ಲಿ ಅಸಮಾಧಾನಗೊಂಡಿದ್ದರು. ಎಲ್‌ಬಿ ಅಪೀಲು ಮಾಡುವಾಗ ಅಂಪೈರ್‌ ಅಲೀಮ್‌ ದರ್‌ ಕಡೆ ಕೊಹ್ಲಿ ‘ಒತ್ತಡ ಹೇರುವ’ ರೀತಿ ಮುನ್ನುಗ್ಗಿದ್ದರು ಎಂದು ಐಸಿಸಿ ಹೇಳಿಕೆ ತಿಳಿಸಿದೆ.

‘ಕೊಹ್ಲಿ ತಪ್ಪೊಪ್ಪಿಕೊಂಡಿದ್ದಾರೆ. ಮ್ಯಾಚ್‌ ರೆಫ್ರಿ ಕ್ರಿಸ್‌ ಬ್ರಾಡ್‌ ತೀರ್ಪನ್ನು ಸಮ್ಮತಿಸಿದ್ದಾರೆ. ಹೀಗಾಗಿ ಈ ಸಂಬಂಧ ವಿಚಾರಣೆ ನಡೆಸುವ ಅಗತ್ಯವಿಲ್ಲ’ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

18 ತಿಂಗಳ ಅವಧಿಯಲ್ಲಿ ಕೊಹ್ಲಿ ಎರಡನೇ ಬಾರಿ ‘ಅನರ್ಹತಾ ಅಂಕ’ ಪಡೆದಿದ್ದಾರೆ. 24 ತಿಂಗಳ ಅವಧಿಯಲ್ಲಿ ನಾಲ್ಕು ಅಥವಾ ಹೆಚ್ಚಿನ ಅನರ್ಹತಾ ಅಂಕ ಪಡೆದರೆ ಅದು ‘ಅಮಾನತು ಅಂಕ’ ವಾಗುತ್ತದೆ.

ಎರಡು ಅಮಾನತು ಅಂಕಗಳು ಬಂದರೆ ಅದು ಒಂದು ಟೆಸ್ಟ್‌ ಅಥವಾ ಎರಡು ಏಕದಿನ ಪಂದ್ಯಗಳ ನಿಷೇಧಕ್ಕೆ (ತಂಡ ಯಾವುದನ್ನು ಮೊದಲು ಆಡುವುದನ್ನು ಅವಲಂಬಿಸಿ) ಸಮನಾಗುತ್ತದೆ.