ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯದ ಅಧ್ಯಯನ ವರದಿ : 50 ಲಕ್ಷ ಉದ್ಯೋಗಗಳು ಖೋತಾ’

0
437

ನೋಟು ರದ್ಧತಿಯ ನಂತರ ದೇಶದಲ್ಲಿ 50 ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.ಬೆಂಗಳೂರಿನ ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯದ ‘ಸೆಂಟರ್ ಫಾರ್ ಸಸ್ಟೇನಬಲ್ ಎಂಪ್ಲಾಯ್‌ಮೆಂಟ್’ ಬಿಡುಗಡೆ ಮಾಡಿರುವ ‘ಭಾರತದಲ್ಲಿನ ಕೆಲಸದ ಸ್ಥಿತಿಗತಿ–2019’ ವರದಿಯಲ್ಲಿ ಈ ಮಾಹಿತಿ ಇದೆ.

ಬೆಂಗಳೂರು: ನೋಟು ರದ್ಧತಿಯ ನಂತರ ದೇಶದಲ್ಲಿ 50 ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಬೆಂಗಳೂರಿನ ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯದ ‘ಸೆಂಟರ್ ಫಾರ್ ಸಸ್ಟೇನಬಲ್ ಎಂಪ್ಲಾಯ್‌ಮೆಂಟ್’ ಬಿಡುಗಡೆ ಮಾಡಿರುವ ‘ಭಾರತದಲ್ಲಿನ ಕೆಲಸದ ಸ್ಥಿತಿಗತಿ–2019’ ವರದಿಯಲ್ಲಿ ಈ ಮಾಹಿತಿ ಇದೆ.

2011ರಿಂದ ನಿರುದ್ಯೋಗದ ಪ್ರಮಾಣ ಏರುತ್ತಲೇ ಇತ್ತು. ಆದರೆ, 2016ರ ಸೆಪ್ಟೆಂಬರ್–ಡಿಸೆಂಬರ್ ಅವಧಿಯಲ್ಲಿ ನಿರುದ್ಯೋಗದ ಪ್ರಮಾಣ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಂದರೆ ಈ ಅವಧಿಯಲ್ಲಿ ಆರ್ಥಿಕತೆಯಲ್ಲಿ ಭಾಗಿಯಾಗುವ ಜನರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. 2018ರ ಅಂತ್ಯದವರೆಗೂ ಇದೇ ಸ್ಥಿತಿ ಮುಂದುವರೆದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

2016ರ ಜನವರಿಯಿಂದ 2018ರ ಡಿಸೆಂಬರ್‌ ನಡುವೆ ದುಡಿಯುವ ವರ್ಗದ ಶೇ 3ರಷ್ಟು ಪುರುಷರು ದುಡಿಮೆಯಿಂದ ಹೊರದೂಡಲ್ಪಟ್ಟಿದ್ದಾರೆ. ಶೇ 3ರಷ್ಟು ಪುರುಷರ ಸಂಖ್ಯೆ ಸುಮಾರು 50 ಲಕ್ಷದಷ್ಟಾಗುತ್ತದೆ. ಇದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಮಹಿಳೆಯರೂ ಈ ಅವಧಿಯಲ್ಲಿ ದುಡಿಮೆಯಿಂದ ದೂರ ಉಳಿದಿದ್ದಾರೆ ಎಂದು ವರದಿ ಬಿಡುಗಡೆ ಮಾಡಿದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಮಿತ್ ಬಸೋಲ್‌ ಹೇಳಿದ್ದಾರೆ.

ದುಡಿಮೆಯಿಂದ ದೂರ ಉಳಿಯುವವರ ಪ್ರಮಾಣ ಏರಿಕೆ ಆಗಲು ನೋಟು ರದ್ಧತಿಯೇ ನೇರ ಕಾರಣ ಎನ್ನುವುದಕ್ಕೆ ಯಾವುದೇ ಪ್ರಬಲ ಕಾರಣಗಳು ಲಭ್ಯವಿಲ್ಲ. ಆದರೆ, ಆ ಅವಧಿಯಲ್ಲೇ ನಿರುದ್ಯೋಗ ಹೆಚ್ಚಾಗಿರುವುದೂ ನಿಜ. ಇದು ಕಾಕತಾಳೀಯವೂ ಆಗಿರಬಹುದು ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ನವದೆಹಲಿ (ಪಿಟಿಐ): ‘ಉದ್ಯೋಗ ಸೃಷ್ಟಿಯಾಗದೇ ದೇಶದ ಆರ್ಥಿಕ ವೃದ್ಧಿ ದರವನ್ನು ಶೇ 7ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಕಾಯ್ದುಕೊಳ್ಳಲು ಸಾಧ್ಯವಿಲ್ಲ’ ಎಂದು ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌ ಹೇಳಿದ್ದಾರೆ.

ಎನ್‌ಡಿಎಯೇತರ ಸರ್ಕಾರಗಳು ಇರುವ ಕರ್ನಾಟಕ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ತಮ್ಮಲ್ಲಿ ಉದ್ಯೋಗ ಅವಕಾಶಗಳು ಸೃಷ್ಟಿಯಾಗಿವೆ ಎಂದು ಹೇಳಿಕೊಂಡಿವೆ. ಎರಡು ರಾಜ್ಯಗಳಲ್ಲಿ ಸಾಧ್ಯವಿರುವುದು ರಾಷ್ಟ್ರೀಯ ಮಟ್ಟದಲ್ಲೇಕೆ ಸಾಧ್ಯವಿಲ್ಲ ಎಂಬುದರತ್ತ ಅವರು ಗಮನ ಸೆಳೆದಿದ್ದಾರೆ. 

ರಘುರಾಂ ರಾಜನ್ ಅನುಮಾನ: ಸಾಕಷ್ಟು ಸಂಖ್ಯೆಯಲ್ಲಿ ಉದ್ಯೋಗ ಅವಕಾಶಗಳು ಸೃಷ್ಟಿಯಾಗದಿರುವಾಗ ಭಾರತದ ಆರ್ಥಿಕತೆಯು ಶೇ 7ರಷ್ಟು ಪ್ರಗತಿ ಸಾಧಿಸುತ್ತಿದೆ ಎಂದು ಹೇಳಿಕೊಳ್ಳುವ ಬಗ್ಗೆ ಆರ್‌ಬಿಐನ ಮಾಜಿ ಗವರ್ನರ್‌ ರಘುರಾಂ ರಾಜನ್‌ ಅವರೂ ಕೆಲ ದಿನಗಳ ಹಿಂದೆ ಅನುಮಾನ ವ್ಯಕ್ತಪಡಿಸಿದ್ದರು.

ಸರ್ಕಾರ ಪ್ರತಿಪಾದಿಸುವ ಆರ್ಥಿಕ ವೃದ್ಧಿ ದರದ (ಜಿಡಿಪಿ) ಬಗ್ಗೆ ಇರುವ ಅನುಮಾನ ಪರಿಹರಿಸಲು ನಿಷ್ಪಕ್ಷಪಾತ ಸಂಸ್ಥೆಯೊಂದನ್ನು ನೇಮಿಸಬೇಕು ಎಂದೂ ಅವರು ಅಭಿಪ್ರಾಯಪಟ್ಟಿದ್ದರು.