ಅಜಾತ ಶತ್ರು, ನವ ಭಾರತದ ಹರಿಕಾರ ಭಾರತ ರತ್ನ “ಅಟಲ್ ಬಿಹಾರಿ ವಾಜಪೇಯಿ” ಇನ್ನಿಲ್ಲ

0
45

ಅಜಾತಶತ್ರು, ಕವಿ ಹೃದಯಿ, ನವ ಭಾರತದ ಹರಿಕಾರ, ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (93) ಅವರು ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ 2018 ರ ಆಗಸ್ಟ್ 16 ರ ಗುರುವಾರ (ಆ) ಕೊನೆಯುಸಿರೆಳೆದರು.

 
ಹೊಸದಿಲ್ಲಿ:ಅಜಾತಶತ್ರು, ಕವಿ ಹೃದಯಿ, ನವ ಭಾರತದ ಹರಿಕಾರ, ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (93) ಅವರು ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ 2018 ರ ಆಗಸ್ಟ್ 16 ರ ಗುರುವಾರ  ಕೊನೆಯುಸಿರೆಳೆದರು. 

ಮಾಜಿ ಪ್ರಧಾನಿ ವಾಜಪೇಯಿ ಅವರು ಆಗಸ್ಟ್ 16ರ ಸಂಜೆ 5.05 ನಿಮಿಷಕ್ಕೆ ವಿಧಿವಶರಾದರು ಎಂದು ಏಮ್ಸ್ ಆಸ್ಪತ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ವಾಜಪೇಯಿ ಪಾರ್ಥಿವ ಶರೀರವನ್ನು ಶೀಘ್ರದಲ್ಲೇ ಏಮ್ಸ್ ಆಸ್ಪತ್ರೆಯಿಂದ ಕೃಷ್ಣ ಮೆನನ್ ರಸ್ತೆಯ ಅವರ ನಿವಾಸಕ್ಕೆ ರವಾನಿಸಲಿದ್ದಾರೆ. 

ವಯೋಸಹಜ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿಯವರಿಗೆ ಕಳೆದೆರಡು ದಿನಗಳಿಂದ ವೆಂಟಿಲೇಟರ್ ಮೂಲಕ ಕೃತಕ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ದಿಲ್ಲಿಯಲ್ಲಿ ಅವರು ದಾಖಲಾಗಿದ್ದ ಆಸ್ಪತ್ರೆಗೆ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಗಣ್ಯರ ದಂಡೇ ಅಲ್ಲಿಗೆ ಹರಿದುಬರುತ್ತಿದೆ. 

ವಾಜಪೇಯಿ 1996 ರಲ್ಲಿ 13 ದಿನ ಹಾಗೂ 1998 ರಿಂದ 2004ವರೆಗೆ (11 ತಿಂಗಳು ಹಾಗೂ ಪೂರ್ಣಾವಧಿ) ಪ್ರಧಾನಿಯಾಗಿ ಈ ದೇಶವನ್ನು ಮುನ್ನಡೆಸಿದ್ದು, ನವ ಭಾರತದ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದಂತಹಾ ಆಡಳಿತವನ್ನು ನೀಡಿದ್ದರು. ಅಂದಿನ ಜನಸಂಘದಿಂದಲೇ ನಾಯಕನಾಗಿ ಗುರುತಿಸಿಕೊಂಡಿದ್ದ ವಾಜಪೇಯಿ, ಬಿಜೆಪಿಯ ಸ್ಥಾಪನೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಮೊರಾರ್ಜಿ ದೇಸಾಯಿ ಅವಧಿಯಲ್ಲಿ ವಿದೇಶಾಂಗ ಸಚಿವರಾಗಿಯೂ ತಮ್ಮ ಛಾಪು ಬೀರಿದ್ದರು.

ಬುಧವಾರ ಸಂಜೆ ಅವರ ಆರೋಗ್ಯ ಸ್ಥಿತಿ ಇನ್ನಷ್ಟು ವಿಷಮಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆ ಆಡಳಿತ ಮಂಡಳಿ ಬಿಡುಗಡೆ ಮಾಡಿದ ಮಾಧ್ಯಮ ಹೇಳಿಕೆಯಲ್ಲಿ, ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಯಾಗಿಲ್ಲ, ಜೀವರಕ್ಷಣಾ ವ್ಯವಸ್ಥೆ (ಲೈಫ್ ಸಪೋರ್ಟ್) ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಲಾಗಿತ್ತು. ಗುರುವಾರ ಬೆಳಗ್ಗೆಯೂ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ

ವಾಜಪೇಯಿ ಅನಾರೋಗ್ಯದ ವಿಷಯ ತಿಳಿಯುತ್ತಿದ್ದಂತೆ ಪ್ರಧಾನಿ ಮೋದಿ ಬುಧವಾರ ಸಂಜೆಯೇ 7.30ಕ್ಕೆ ಏಮ್ಸ್‌ಗೆ ಆಗಮಿಸಿ, ಅವರ ಆರೋಗ್ಯ ಪರಿಸ್ಥಿತಿಯ ಮಾಹಿತಿ ಪಡೆದಿದ್ದರು.