ಅಗ್ರ ಸ್ಥಾನದಿಂದ ಕೆಳಕ್ಕೆ ಜಾರಿದ “ವಿರಾಟ್ ಕೊಹ್ಲಿ”

0
56

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ತಾಜಾ ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನವನ್ನು ಕಳೆದುಕೊಂಡಿದ್ದಾರೆ.

ಲಂಡನ್: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ತಾಜಾ ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನವನ್ನು ಕಳೆದುಕೊಂಡಿದ್ದಾರೆ. 

ಇಂಗ್ಲೆಂಡ್ ವಿರುದ್ದ ಸಾಗುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಶತಕ (149) ಹಾಗೂ ಅರ್ಧಶತಕ (51) ಸೇರಿದಂತೆ ಒಟ್ಟು 200 ರನ್ ಗಳಿಸಿರುವ ಕೊಹ್ಲಿ, ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದರು. 

ಆದರೆ ಲಾರ್ಡ್ಸ್‌ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮತ್ತದೇ ಶ್ರೇಷ್ಠ ಫಾರ್ಮ್ ಕಂಡುಕೊಳ್ಳುವಲ್ಲಿ ಕೊಹ್ಲಿ ವಿಫಲವಾಗಿದ್ದರು. ಬೆನ್ನು ನೋವಿಗೆ ಒಳಗಾಗಿರುವ ಕೊಹ್ಲಿ ಅನುಕ್ರಮವಾಗಿ 23 ಹಾಗೂ 17 ರನ್‌ಗಳನ್ನಷ್ಟೇ ಗಳಿಸಿದ್ದರು. 

ಕೊಹ್ಲಿ ಇದೀಗ 919ರ ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಬಾಲ್ ಟ್ಯಾಂಪರಿಂಗ್ ಪ್ರಕರಣದಿಂದಾಗಿ ಒಂದು ವರ್ಷದ ನಿಷೇಧ ಎದುರಿಸುತ್ತಿರುವ ಸ್ಮಿತ್ 929 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. 851 ರೇಟಿಂಗ್ ಅಂಕ ಹೊಂದಿರುವ ಇಂಗ್ಲೆಂಡ್ ನಾಯಕ ಜೋ ರೂಟ್ ಮೂರನೇ ಸ್ಥಾನದಲ್ಲಿದ್ದಾರೆ. 

ಈ ಮೊದಲು ಜೀವಮಾನ ಶ್ರೇಷ್ಠ 934 ರೇಟಿಂಗ್ ಅಂಕಗಳನ್ನು ಪಡೆದ ಕೊಹ್ಲಿ ನಂ.1 ಪಟ್ಟ ಆಲಂಕರಿಸಿದ್ದರು. ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರೇಟಿಂಗ್ ಅಂಕ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಹಾಗೂ ಒಟ್ಟಾರೆಯಾಗಿ 14ನೇ ಆಟಗಾರ ಎಂಬ ಕೀರ್ತಿಗೆ ಪಾತ್ರವಾಗಿದ್ದರು. 

ಅಷ್ಟೇ ಯಾಕೆ 2011ರಲ್ಲಿ ಸಚಿನ್ ತೆಂಡೂಲ್ಕರ್ ಬಳಿಕ ಟೆಸ್ಟ್ ಕ್ರಿಕೆಟ್‌ ಶ್ರೇಯಾಂಕದಲ್ಲಿ ಅಗ್ರ ಪಟ್ಟಕ್ಕೇರಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೂ ಅರ್ಹವಾಗಿದ್ದರು. 

ಇನ್ನು ಟೆಸ್ಟ್ ಬ್ಯಾಟಿಂಗ್ ಪಟ್ಟಿಯಲ್ಲಿ ನಂ.1 ರ‍್ಯಾಂಕ್ ಪಡೆದ ಆರನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು. ಕೊಹ್ಲಿ, ಸಚಿನ್ ಹೊರತಾಗಿ ದಿಲೀಪ್ ವೆಂಗಾಸರ್ಕಾರ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ್ ಅಗ್ರ ಸ್ಥಾನ ಆಲಂಕರಿಸಿದ್ದರು.