ಅಕ್ರಮ ಕಟ್ಟಡಕ್ಕೆ ಕಾರಣರಾದರೆ ಅಧಿಕಾರಿಗಳಿಗೆ 2 ವರ್ಷ ಜೈಲು( ಅಧಿಕಾರಿಗಳನ್ನು ಶಿಕ್ಷಿಸಲು ಅಧಿಸೂಚನೆ ಸಿದ್ಧ)

0
475

ನಗರ ಮತ್ತು ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಕಾರಣರಾಗುವ ಅಧಿಕಾರಿಗಳಿಗೆ 2 ವರ್ಷ ಸಾದಾ ಜೈಲು ಶಿಕ್ಷೆ ಮತ್ತು ₹ 50 ಸಾವಿರದವರೆಗೆ ಗರಿಷ್ಠ ದಂಡ ನಿಗದಿ ಮಾಡಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಬೆಂಗಳೂರು: ‘ನಗರ ಮತ್ತು ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಕಾರಣರಾಗುವ ಅಧಿಕಾರಿಗಳಿಗೆ 2 ವರ್ಷ ಸಾದಾ ಜೈಲು ಶಿಕ್ಷೆ ಮತ್ತು  50 ಸಾವಿರದವರೆಗೆ ಗರಿಷ್ಠ ದಂಡ ನಿಗದಿ ಮಾಡಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

‘ಖಾಸಗಿ ಸ್ವತ್ತುಗಳಲ್ಲಿ ಕಾನೂನು ಬಾಹಿರ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ಅಧಿಕಾರಿಗಳನ್ನು, ಕರ್ನಾಟಕ ಪೌರಾಡಳಿತ ಕಾಯ್ದೆ–1976ರ ಕಲಂ 321 ಬಿ ಅನ್ವಯ ದಂಡನೀಯ ಶಿಕ್ಷೆಗೆ ಗುರಿಪಡಿಸಲು ಇರುವ ವಿವರಗಳನ್ನು ವಿಶದಪಡಿಸುವಂತೆ ರಾಜ್ಯ ಸರ್ಕಾರಕ್ಕೆನಿರ್ದೇಶಿಸಬೇಕು’ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್. ಸುಜಾತಾ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರಿ ವಕೀಲ ಡಿ.ನಾಗರಾಜ್, ಈ ಕುರಿತಂತೆ ರಾಜ್ಯ ಸರ್ಕಾರ ಹೊರಡಿಸಿರುವ ಕರಡು ಅಧಿ
ಸೂಚನೆಯ ಮಾಹಿತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಲು ಮುಂದಾದರು. ಆದರೆ, ‘ನ್ಯಾಯಪೀಠ ಇದನ್ನು ಕೋರ್ಟ್ ಕಚೇರಿಯಲ್ಲೇ ಸಲ್ಲಿಸಿ’ ಎಂದು ಸೂಚಿಸಿ ವಿಚಾರಣೆಯನ್ನು 2019ರ ಜನವರಿ 9ಕ್ಕೆ ಮುಂದೂಡಿತು.

ವಿವಿಧ ಹಂತಗಳು: ಮನೆ ಪಾಯ ತೆಗೆಯುವ ಹಂತದಿಂದ ಸ್ವಾಧೀನ ಪತ್ರ ಪಡೆಯುವವರೆಗಿನ ವಿವಿಧ ಸ್ತರಗಳಲ್ಲಿ ಅಧಿಕಾರಿಗಳು ತಂತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣ ತಡೆಗಟ್ಟಲು ವಿಫಲವಾದರೆ ಅಥವಾ ನಿರ್ಮಾಣಕ್ಕೆ ಕಾರಣವಾದರೆ ಅಂಥವರು ಶಿಕ್ಷೆಗೆ ಗುರಿಯಾಗುತ್ತಾರೆ.

ಕರ್ನಾಟಕ ಪೌರಾಡಳಿತ ಕಾಯ್ದೆ ಮತ್ತು ಕಟ್ಟಡ ಬೈ–ಲಾಗಳ ಅನ್ವಯ ಈ ಶಿಕ್ಷೆ ಮತ್ತು ದಂಡ ನಿಗದಿಪಡಿಸಲಾಗಿದೆ. ಇದನ್ನು ಮಂಗಳವಾರವಷ್ಟೇ (ನ.27) ಕರಡು ಅಧಿಸೂಚನೆ ಮೂಲಕ ಪ್ರಕಟಿಸಲಾಗಿದೆ.

ಆಕ್ಷೇಪಣೆಗೆ ಗಡುವು: ಬೈ–ಲಾ ಉಲ್ಲಂಘನೆ, ಅ‍ಪರಾಧದ ಸ್ವರೂಪ ಮತ್ತು ಅದಕ್ಕೆ ಶಿಕ್ಷೆ ಹಾಗೂ ದಂಡ ವಿಧಿಸುವ ಕುರಿತಂತೆ ಅಧಿಸೂಚನೆಯಲ್ಲಿ 52 ನಮೂನೆಯ ವರ್ಗೀಕರಣ ಮಾಡಲಾಗಿದೆ. ಸಾರ್ವಜನಿಕರಿಂದ ಆಕ್ಷೇಪ ಅಥವಾ ಸಲಹೆಗಳಿದ್ದಲ್ಲಿ 30 ದಿನಗಳಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಬಿಸಿ ಮುಟ್ಟಲಿದೆ: ‘ಈ ಕಾನೂನು ಜಾರಿಯಾದಲ್ಲಿ, ಅಕ್ರಮಗಳನ್ನು ತಡೆಗಟ್ಟಲು ವಿಫಲರಾಗುವ ಪಾಲಿಕೆ ಅಧಿಕಾರಿಗಳಿಗೆ ಹಾಗೂ ಬಿಲ್ಡರ್‌ಗಳಿಗೆ ಬಿಸಿ ಮುಟ್ಟಲಿದೆ’ ಎಂಬುದು ಅರ್ಜಿದಾರರೂ ಆದ ವಕೀಲ ಎಸ್. ಉಮಾಪತಿ ಅವರ ಅಭಿಪ್ರಾಯ.

‘ನಿರ್ಮಾಣ ಕ್ಷೇತ್ರದಲ್ಲಿರುವ ಮಾಫಿಯಾವನ್ನು ತಡೆಗಟ್ಟಲು ಇದರಿಂದ ಸಹಕಾರಿಯಾಗಲಿದೆ’ಎಂದು ಅವರು ಹೇಳುತ್ತಾರೆ.

‘ಬಿಬಿಎಂಪಿ ಸಲ್ಲಿಸಿದ್ದ ಪ್ರಸ್ತಾವ’

‘ತಪ್ಪಿತಸ್ಥ ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸುವ ಕುರಿತಂತೆ ಇರುವ ವಿವರಗಳನ್ನು ತಿಳಿಸಿ ಎಂದು ಬೃಹತ್‌ ಬೆಂಗಳೂರು ಪಾಲಿಕೆ (ಬಿಬಿಎಂಪಿ) ವತಿಯಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಬಂದಿತ್ತು’ ಎಂದು ಡಿ.ನಾಗರಾಜ್‌ ಹೇಳಿದರು. ಈ ಕುರಿತಂತೆ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ಅವರು, ‘ಈ ಪ್ರಸ್ತಾವದ ಅನ್ವಯವೇ ಕರಡು ಅಧಿಸೂಚನೆ ಸಿದ್ಧಪಡಿಸಲಾಗಿದೆ’ ಎಂದು ತಿಳಿಸಿದರು.

ಅರ್ಜಿದಾರರ ವಾದವೇನು?

‘ಅಕ್ರಮ ಕಟ್ಟಡ ನಿರ್ಮಾಣಕ್ಕೆ ಕಾರಣರಾಗುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಿ ಕೆಎಂಸಿ ಕಾಯ್ದೆ-1976ಕ್ಕೆ 2000ನೇ ಇಸವಿಯಲ್ಲಿ ತಿದ್ದುಪಡಿ ತರಲಾಗಿದೆ. ಆದರೆ, ಈತನಕ ಯಾವೊಬ್ಬ ಅಧಿಕಾರಿಗೂ ಶಿಕ್ಷೆಯಾಗಿಲ್ಲ’ ಎಂಬುದು ಅರ್ಜಿದಾರರ ಆಕ್ಷೇಪ.

‘ಶಿಕ್ಷೆ ಹೇಗಿರಬೇಕು, ಯಾವ ಪ್ರಮಾಣದಲ್ಲಿರಬೇಕು ಎಂಬ ಬಗ್ಗೆ ಸರ್ಕಾರ ಈವರೆಗೂ ಯಾವುದೇ ಮಾರ್ಗಸೂಚಿ ಅಥವಾ ಅಧಿಸೂಚನೆ ಹೊರಡಿಸಿಲ್ಲ’ ಎಂದು ಅವರು ದೂರಿದ್ದಾರೆ.