ಅಕ್ಟೋಬರ್ 5 ರಿಂದ “ಪ್ರೊ ಕಬಡ್ಡಿ ಲೀಗ್ (ಪಿಕೆಎಲ್)” ಟೂರ್ನಿ ಆರಂಭ

0
64

ಬಹುನಿರೀಕ್ಷಿತ 6ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಟೂರ್ನಿಯನ್ನು ಪೂರ್ವನಿಗದಿಗಿಂತ 15 ದಿನ ಮುಂಚಿತವಾಗಿ ಆರಂಭಿಸಲಾಗುತ್ತಿದೆ. ಈ ಹಿಂದಿನ ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್ 19ರಂದು ಆರಂಭವಾಗಬೇಕಿದ್ದ ಪಿಕೆಎಲ್ ಟೂರ್ನಿಗೆ ಅಕ್ಟೋಬರ್ 5ರಂದೇ ಚಾಲನೆ ಸಿಗಲಿದೆ.

ಬೆಂಗಳೂರು: ಬಹುನಿರೀಕ್ಷಿತ 6ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಟೂರ್ನಿಯನ್ನು ಪೂರ್ವನಿಗದಿಗಿಂತ 15 ದಿನ ಮುಂಚಿತವಾಗಿ ಆರಂಭಿಸಲಾಗುತ್ತಿದೆ. ಈ ಹಿಂದಿನ ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್ 19ರಂದು ಆರಂಭವಾಗಬೇಕಿದ್ದ ಪಿಕೆಎಲ್ ಟೂರ್ನಿಗೆ ಅಕ್ಟೋಬರ್ 5ರಂದೇ ಚಾಲನೆ ಸಿಗಲಿದೆ.

ಲೀಗ್​ನ ನೇರಪ್ರಸಾರದ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ನೆಟ್​ವರ್ಕ್​ನ ವೇಳಾಪಟ್ಟಿ ಹಾಗೂ 2019ರಲ್ಲಿ ನಡೆಯಲಿರುವ ಪ್ರಮುಖ ಕಬಡ್ಡಿ ಟೂರ್ನಿಗಳ ವೇಳಾಪಟ್ಟಿ ಗಮನಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪರಿಷ್ಕೃತ ವೇಳಾಪಟ್ಟಿಯಂತೆ ಅಕ್ಟೋಬರ್ 5ಕ್ಕೆ ಆರಂಭಗೊಳ್ಳಲಿರುವ ಟೂರ್ನಿಯು ಜನವರಿ 5ಕ್ಕೆ ಮುಕ್ತಾಯಗೊಳ್ಳಲಿದೆ. ಬಳಿಕ 2019ರ ಫೆಬ್ರವರಿ-ಮಾರ್ಚ್​ನಲ್ಲಿ ಕಬಡ್ಡಿ ವಿಶ್ವಕಪ್ ನಡೆಯಲಿದೆ. ಇದಾದ ಬಳಿಕ 2019ರ ಜುಲೈ ಆರಂಭದಲ್ಲೇ 7ನೇ ಆವೃತ್ತಿಯ ಪಿಕೆಎಲ್ ಶುರುವಾಗಲಿದೆ.

ಆಟಗಾರರ ಹಿತದೃಷ್ಟಿಯಿಂದ ಆಯೋಜಕರು ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆಟಗಾರರು ಹೆಚ್ಚು ಸಮಯ ಕ್ಯಾಂಪ್​ನಲ್ಲಿ ಕಳೆಯುವುದರಿಂದ ವಿಶ್ರಾಂತಿ ನೀಡಲು ಸಾಧ್ಯವಾಗುತ್ತಿಲ್ಲ. ಆಟಗಾರರ ಫಿಟ್ನೆಸ್ ಹಾಗೂ ಮುಂದಿನ ಟೂರ್ನಿಗಳ ವೇಳಾಪಟ್ಟಿ ಗಮನಿಸಿ ಆಯೋಜಕರು ಈ ನಿರ್ಧಾರ ಕೈಗೊಂಡಿರಬಹುದು ಎಂದು ಪ್ರೊ ಕಬಡ್ಡಿ ಲೀಗ್ ತಂಡವೊಂದರ ಕೋಚ್ ‘ವಿಜಯವಾಣಿ’ಗೆ ತಿಳಿಸಿದರು. ಈ ಮೊದಲು ಅಕ್ಟೋಬರ್ 19ರಿಂದ ಜನವರಿ 19ರವರೆಗೆ ಟೂರ್ನಿ ನಿಗದಿಯಾಗಿತ್ತು.

ಕಂಠೀರವದಲ್ಲೇ ಬೆಂಗಳೂರು ಚರಣ?

ಬೆಂಗಳೂರು ಬುಲ್ಸ್ ತಂಡದ ತವರಿನ ಪಂದ್ಯಗಳು ಈ ಬಾರಿ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲೇ ನಡೆಯುವ ಸಾಧ್ಯತೆಗಳಿವೆ. ಕಳೆದ ಬಾರಿ ಕ್ರೀಡಾ ಇಲಾಖೆ ಹಾಗೂ ತಂಡದ ಮಾಲೀಕರ ನಡುವಿನ ಕಿತ್ತಾಟದಿಂದಾಗಿ ಬೆಂಗಳೂರು ಚರಣದ ಪಂದ್ಯಗಳು ನಾಗ್ಪುರಕ್ಕೆ ಸ್ಥಳಾಂತರಗೊಂಡಿದ್ದವು. ಈ ಕುರಿತು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ ಬೆಂಗಳೂರು ಬುಲ್ಸ್ ತಂಡದ ಮಾಲೀಕ ಉದಯ್ ಸಿನ್ಹಾ ವಾಲಾ, ‘ಬೆಂಗಳೂರಿನಲ್ಲೇ ಪಂದ್ಯವಾಡಲು ನಮಗೂ ಖುಷಿ. ಕಂಠೀರವ ಸ್ಟೇಡಿಯಂಗಾಗಿ ಕ್ರೀಡಾ ಇಲಾಖೆಗೆ ಅರ್ಜಿ ಸಲ್ಲಿಸಿದ್ದು, ಅವರ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ. ಕ್ರೀಡಾ ಇಲಾಖೆಯವರು ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ’ ಎಂದರು.

ಯು ಮುಂಬಾ ತವರಿನ ಚರಣ ಶಿಫ್ಟ್?

ಮುಂಬೈ: ಯು ಮುಂಬಾ ತಂಡ 6ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನಲ್ಲಿ ತನ್ನ ತವರು ಕ್ರೀಡಾಂಗಣವನ್ನು ಬದಲಾಯಿಸುವ ನಿರೀಕ್ಷೆಯಿದೆ. ಕಳೆದ 5 ಆವೃತ್ತಿಗಳಿಂದ ದಿ ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾ ಡೋಮ್ ಅರೇನಾದಲ್ಲಿ ಮುಂಬೈ ತಂಡ ತವರಿನ ಚರಣದ ಪಂದ್ಯಗಳನ್ನು ಆಯೋಜಿಸಿತ್ತು. ಆದರೆ ಈ ಬಾರಿ ಕ್ರೀಡಾಂಗಣದ ಮಾಲೀಕರು ಬಾಡಿಗೆ ದುಬಾರಿಗೊಳಿಸಿದ್ದಾರೆ ಎನ್ನುವ ಕಾರಣದಿಂದ ಮುಂಬೈ ಫ್ರಾಂಚೈಸಿ ತವರಿನ ಚರಣದ ಪಂದ್ಯಗಳಿಗೆ ಬೇರೆ ಕ್ರೀಡಾಂಗಣದ ಹುಡುಕಾಟದಲ್ಲಿದೆ. ಮುಂಬೈಯ ಮುನ್ಶಿ ನಗರದಲ್ಲಿರುವ ಅಂಧೇರಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಅಥವಾ ನಾಸಿಕ್​ನಲ್ಲಿರುವ ಮಿನಾಥಾಯ್ ಠಾಕ್ರೆ ಕ್ರೀಡಾಂಗಣದಲ್ಲಿ ಆಯೋಜಿಸುವ ಯೋಜನೆಯಲ್ಲಿದೆ. ವೊರ್ಲಿಯ ಲೋಟಸ್ ಕಾಲೊನಿಯಲ್ಲಿರುವ ಡೋಮ್ ಅರೇನಾ ಕ್ರೀಡಾಂಗಣ ಈಗ ದಿನಕ್ಕೆ ಬರೋಬ್ಬರಿ 25 ಲಕ್ಷ ರೂ. ಕೇಳುತ್ತಿದೆ ಎನ್ನಲಾಗಿದೆ. ಒಂದು ವೇಳೆ ಮುಂಬಾ ಇದೇ ಕ್ರೀಡಾಂಗಣವನ್ನು ಆಯ್ಕೆ ಮಾಡಿದರೆ ಮುಂದಿನ ಆವೃತ್ತಿಯ ವೇಳೆ, ಕೇವಲ ಕ್ರೀಡಾಂಗಣ ಬಾಡಿಗೆಗೆ 2.5 ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಕಳೆದ ಬಾರಿ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್, ಪ್ರೊ ರೆಸ್ಲಿಂಗ್ ಲೀಗ್​ನಲ್ಲಿ ಕೂಡ ಇದೇ ಕಾರಣಕ್ಕೆ ಮುಂಬೈ ತವರಿನ ಪಂದ್ಯಗಳನ್ನು ಡೋಮ್ ಅರೇನಾ ಬದಲು ಬೇರೆ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.