ಅಕ್ಟೋಬರ್ 21 ರ ಸೋಮವಾರ ಆಸ್ಟ್ರೇಲಿಯಾದ ಪ್ರಮುಖ ಪತ್ರಿಕೆಗಳ ಮೊದಲನೇ ಪುಟ ಖಾಲಿ ಖಾಲಿ!

0
18

ಆಸ್ಟ್ರೇಲಿಯಾ ಸರಕಾರದ ಗೌಪ್ಯತೆ ಹಾಗೂ ಮಾದ್ಯಮ ಸ್ವಾತಂತ್ರ್ಯ ಹತ್ತಿಕ್ಕುವ ಕ್ರಮದ ವಿರುದ್ಧ ಸಿಡಿದೆದ್ದ ಪ್ರಮುಖ ದಿನಪತ್ರಿಕೆಗಳು ಪ್ರತಿಭಟನಾರ್ಥವಾಗಿ ತಮ್ಮ ಪತ್ರಿಕೆಯ ಮೊದಲನೇ ಪುಟದಲ್ಲಿ ಯಾವುದೇ ವಿಷಯವನ್ನು ಮುದ್ರಿಸದೆ ಸುಮ್ಮನೇ ಕಪ್ಪುಗೆರೆಯನ್ನು ಎಳೆದು ಬಲಗಡೆ ಮೇಲ್ಭಾಗದಲ್ಲಿ ಕೆಂಪು ಬಣ್ಣದಲ್ಲಿ ‘ಸೀಕ್ರೆಟ್’ ಎಂದು ಮಾತ್ರವೇ ಬರೆದಿದ್ದವು.

ಸಿಡ್ನಿ: ಅಕ್ಟೋಬರ್ 21 ಸೋಮವಾರ ಆಸ್ಟ್ರೇಲಿಯಾದ ಪ್ರಮುಖ ದಿನಪತ್ರಿಕೆಗಳನ್ನು ನೋಡಿದವರಿಗೆ ಒಂದು ಅಚ್ಚರಿ ಕಾದಿತ್ತು. ಈ ಪತ್ರಿಕೆಗಳ ಮೊದಲನೇ ಪುಟದಲ್ಲಿ ಯಾವುದೇ ಸುದ್ದಿ ಮುದ್ರಣಗೊಂಡಿರಲಿಲ್ಲ. ಸುಮ್ಮನೇ ಕಪ್ಪುಗೆರೆಯನ್ನು ಎಳೆದು ಬಲಗಡೆ ಮೇಲ್ಭಾಗದಲ್ಲಿ ಕೆಂಪು ಬಣ್ಣದಲ್ಲಿ ‘ಸೀಕ್ರೆಟ್’ ಎಂದು ಮಾತ್ರವೇ ಬರೆಯಲಾಗಿತ್ತು.ಅಲ್ಲಿನ ಸರಕಾರದ ಗೌಪ್ಯತೆ ಪಾಲನಾ ನೀತಿ ಹಾಗೂ ಮಾದ್ಯಮ ಸ್ವಾತಂತ್ರ್ಯ ಹತ್ತಿಕ್ಕುವ ಕ್ರಮದ ವಿರುದ್ಧ ಸಿಡಿದೆದ್ದ ಪತ್ರಿಕೆಗಳು ಈ ವಿಶಿಷ್ಟ ರೀತಿಯ ಪ್ರತಿಭಟನೆಯನ್ನು ಸರಕಾರದ ವಿರುದ್ಧ ವ್ಯಕ್ತಪಡಿಸಿದವು.

ದಿ ಆಸ್ಟ್ರೇಲಿಯನ್, ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಮತ್ತು ದಿ ಆಸ್ಟ್ರೇಲಿಯನ್ ಫೈನಾನ್ಷಿಯಲ್ ರಿವ್ಯೂ ಸೇರಿದಂತೆ ಇಲ್ಲಿನ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪತ್ರಿಕೆಗಳ ಮೊದಲನೇ ಪುಟಗಳಲ್ಲಿ ಸುದ್ದಿಗಳು ಮುಷ್ಕರ ಹೂಡಿದ್ದವು. ಇನ್ನು ಆಸ್ಟ್ರೇಲಿಯಾದ್ಯಂತ ಟಿ.ವಿ. ಚಾನೆಲ್ ಗಳಲ್ಲಿ ಕೇವಲ ಜಾಹೀರಾತುಗಳನ್ನು ಮಾತ್ರವೇ ಪ್ರಸಾರ ಮಾಡಲಾಯಿತು. ‘ಸರಕಾರವು ನಿಮ್ಮಿಂದ ಸತ್ಯವನ್ನು ಮುಚ್ಚಿಟ್ಟಾಗ, ನಾವು ಏನನ್ನು ಪ್ರಸಾರ ಮಾಡೋಣ?’ ಎಂಬ ಪ್ರಶ್ನೆಯನ್ನೂ ಸಹ ಇದೇ ಸಂದರ್ಭದಲ್ಲಿ ವೀಕ್ಷಕರಿಗೆ ಕೇಳಲಾಯಿತು.

ರಾಷ್ಟ್ರೀಯ ಸುದ್ದಿ ಪ್ರಸಾರ ಮಾಧ್ಯಮ ಎಬಿಸಿ ಮತ್ತು ಸುದ್ದಿ ಸಂಸ್ಥೆಯೊಂದರ ಪತ್ರಕರ್ತರ ಮೇಲೆ ಈ ವರ್ಷಾರಂಭದಲ್ಲಿ ನಡೆದಿದ್ದ ಫೆಡರಲ್ ಪೊಲೀಸರ ದಾಳಿಯನ್ನು ಖಂಡಿಸಿ ರೈಟ್ ಟು ನೋ ಒಕ್ಕೂಟ ಈ ಅಭಿಯಾನಕ್ಕೆ ಚಾಲನೆ ನೀಡಿತ್ತು. ಸರಕಾರಕ್ಕೆ ಮುಜುಗರ ಉಂಟುಮಾಡುವ ರೀತಿಯಲ್ಲಿ ಎರಡು ಸುದ್ದಿಗಳು ಪ್ರಸಾರವಾಗಿದ್ದ ಕಾರಣಕ್ಕೆ ಸರಕಾರ ಈ ಪೊಲೀಸ್ ದಾಳಿಗಳನ್ನು ನಡೆಸಿತ್ತು ಎನ್ನುವುದು ಮಾದ್ಯಮಗಳ ಆರೋಪವಾಗಿತ್ತು.

ಪತ್ರಕರ್ತರು ತಮ್ಮ ಕರ್ತವ್ಯ ನಿರ್ವಹಿಸುವುದನ್ನು ಸುಲಭವಾಗಿ ತಡೆಯಬಲ್ಲ ಕಠಿಣ ರಾಷ್ಟ್ರೀಯ ಭದ್ರತಾ ಕಾನೂನಿನಿಂದ ಪತ್ರಕರ್ತರಿಗೆ ವಿನಾಯಿತಿ ಸೇರಿದಂತೆ ಒಟ್ಟು ಆರು ಬೇಡಿಕೆಗಳನ್ನು ಮಾಧ್ಯಮ ಸಮೂಹಗಳ ಈ ಒಕ್ಕೂಟ ಸರಕಾರದ ಮುಂದಿರಿಸಿದೆ. ಪೊಲೀಸರ ದಾಳಿಯ ಬಳಿಕ ಮೂವರು ಪತ್ರಕರ್ತರು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.