ಅಕ್ಟೋಬರ್ 21 ರ ಅಂತರಾಷ್ಟ್ರೀಯ ಪ್ರಚಲಿತ ಘಟನೆಗಳು

0
16

ಈ ಕೆಳಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಕುರಿತು ಸಂಕ್ಷಿಪ್ತವಾಗಿ ವಿವರಣೆ ನೀಡಲಾಗಿದೆ.

ಅಬುಧಾಬಿಯಲ್ಲಿ ವಿಶ್ವದ ಹಳೆಯ ಹವಳ ಪತ್ತೆ

ಅಬುಧಾಬಿ (ಎಎಫ್‌ಪಿ): 8 ಸಾವಿರ ವರ್ಷದಷ್ಟು ಹಳೆಯದು ಎನ್ನಲಾದ ಹವಳವೊಂದನ್ನು ಪುರಾತತ್ವಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ. ಇಲ್ಲಿನ ಪ್ಯಾರಿಸ್‌ ಮ್ಯೂಸಿಯಂನಲ್ಲಿ ಇದೇ ಅಕ್ಟೋಬರ್ 30ರಿಂದ ಇದನ್ನು ಸಾರ್ವಜನಿಕ  ಪ್ರದರ್ಶನಕ್ಕೆ ಇಡಲಾಗುವುದು.

‘ಸಂಯುಕ್ತ ಅರಬ್‌ ಸಂಸ್ಥಾನಗಳ (ಯುಎಇ) ರಾಜಧಾನಿ ಸಮೀಪ ಇರುವ ಮಾರವಾಹ್ ದ್ವೀಪದಲ್ಲಿ ಉತ್ಖನನ ನಡೆಸುತ್ತಿರುವಾಗ ಈ ಹವಳ ಪತ್ತೆಯಾಗಿದೆ. ಇದನ್ನು ಅಬುಧಾಬಿ ಪರ್ಲ್‌ ಎಂಬುದಾಗಿ ಕರೆಯಲಾಗುತ್ತಿದೆ’ ಎಂದು ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಚೇರಮನ್‌ ಮೊಹಮದ್ ಅಲ್‌–ಮುವಬಾರಕ್‌ ತಿಳಿಸಿದ್ದಾರೆ.

‘ಕಾರ್ಬನ್‌ ಡೇಟಿಂಗ್ ತಂತ್ರಜ್ಞಾನ ಮೂಲಕ ಪರಿಶೀಲನೆ ನಡೆಸಿದಾಗ, ಈ ಹವಳ ಕ್ರಿಸ್ತ ಪೂರ್ವ 5,800–5,600ರ ನಿಯೊಲಿಥಿಕ್ ಅವಧಿಯದ್ದು ಎಂಬುದು ದೃಢಪಟ್ಟಿದೆ’ ಎಂದೂ ಅವರು ಹೇಳಿದ್ದಾರೆ.

‘ಅಬುಧಾಬಿ ಕರಾವಳಿಯಲ್ಲಿ ಇಂತಹ ಅಮೂಲ್ಯ ಹವಳಗಳು ಹೇರಳವಾಗಿ ಸಿಗುತ್ತಿದ್ದವು ಎಂಬ ಅಂಶವನ್ನು 16ನೇ ಶತಮಾನದಲ್ಲಿ ಈ ಭಾಗದಲ್ಲಿ ಸಂಚರಿಸಿದ್ದ ವೆನಿಸ್‌ ನಗರದ ವಜ್ರಾಭರಣ ವ್ಯಾಪಾರಿ ಗ್ಯಾಸ್ಪರೊ ಬಾಲ್ಬಿ ತನ್ನ ಕೃತಿಗಳಲ್ಲಿ ಉಲ್ಲೇಖಿಸಿದ್ದಾನೆ’ ಎಂದೂ ಇಲಾಖೆ ಹೇಳಿದೆ.

ಸಾವಿರಾರು ವರ್ಷಗಳ ಹಿಂದೆಯೇ ಆರ್ಥಿಕ ಹಾಗೂ ಸಾಂಸ್ಕೃತಿಕ ರಂಗದ ಬೇರುಗಳು ಅಬುಧಾಬಿ ಪರಿಸರದಲ್ಲಿ ಪಸರಿಸಿದ್ದವು ಎಂಬುದಕ್ಕೆ ಇದು ಸಾಕ್ಷಿ’ ಎಂದು ಮೊಹಮದ ಅಲ್‌–ಮುವಬಾರಕ್‌ ಹೇಳಿದ್ದಾರೆ.

 

ಫಿಲಿಫೈನ್ಸ್: ಗಾಂಧಿ ಪುತ್ಥಳಿ ಅನಾವರಣ

ಮನಿಲಾ (ಪಿಟಿಐ): ಇಲ್ಲಿನ ಮಿರಿಯಮ್‌ ಕಾಲೇಜಿನ ಆವರಣದಲ್ಲಿ ಸ್ಥಾಪಿಸಲಾಗಿರುವ ಮಹಾತ್ಮ ಗಾಂಧಿ ಪುತ್ಥಳಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಭಾನುವಾರ ಅನಾವರಣಗೊಳಿಸಿದರು. 

ಸ್ಪ್ಯಾನಿಶ್‌ ವಸಹಾತುಶಾಹಿ ವಿರುದ್ಧ ಹೋರಾಡಿದ ಫಿಲಿಪ್ಪೀನ್ಸ್‌ ನಾಯಕ ಜೋಸ್‌ ರಿಜಲ್‌ ಅವರನ್ನು ಸ್ಮರಿಸಿದ ಕೋವಿಂದ್‌ ಅವರು, ಗಾಂಧಿ ಮತ್ತು ರಿಜಲ್ ಅವರ ಹೋರಾಟದಲ್ಲಿದ್ದ ಸಾಮ್ಯತೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. 

ಸಹಭಾಗಿತ್ವ: ಇದಕ್ಕೂ ಮೊದಲು ಭಯೋತ್ಪಾದನೆ ನಿರ್ಮೂಲನೆ, ರಕ್ಷಣೆ ಮತ್ತು ಸಾಗರ ಭದ್ರತೆಯಲ್ಲಿ ರಾಷ್ಟ್ರಗಳ ಸಹಭಾಗಿತ್ವದ ಕುರಿತು ಕೋವಿಂದ್‌ ಮತ್ತು ಫಿಲಿಪ‍್ಪೀನ್ಸ್ ಅಧ್ಯಕ್ಷ ರೋಡ್ರಿಗೊ ಡುಟರ್ಟೆ ಚರ್ಚೆ ನಡೆಸಿದರು.