ಅಂತಾರಾಷ್ಟ್ರೀಯ ಟಿ20ಗೆ “ಜೂಲನ್‌ ಗೋಸ್ವಾಮಿ” ವಿದಾಯ

0
668

ಭಾರತ ಮಹಿಳಾ ಕ್ರಿಕೆಟ್‌ ತಂಡದ ಅನುಭವಿ ವೇಗದ ಬೌಲರ್‌ ಜೂಲನ್‌ ಗೋಸ್ವಾಮಿ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ವೃತ್ತಿಬದುಕಿಗೆ ಆಗಸ್ಟ್ 23 ರ ಗುರುವಾರ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ನವೆಂಬರ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಿಂದ ಅಧಿಕೃತವಾಗಿ ಹೊರಗುಳಿದಿದ್ದಾರೆ.

ಹೊಸದಿಲ್ಲಿ: ಭಾರತ ಮಹಿಳಾ ಕ್ರಿಕೆಟ್‌ ತಂಡದ ಅನುಭವಿ ವೇಗದ ಬೌಲರ್‌ ಜೂಲನ್‌ ಗೋಸ್ವಾಮಿ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ವೃತ್ತಿಬದುಕಿಗೆ ಆಗಸ್ಟ್ 23 ರ ಗುರುವಾರ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ನವೆಂಬರ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಿಂದ ಅಧಿಕೃತವಾಗಿ ಹೊರಗುಳಿದಿದ್ದಾರೆ. 

ಭಾರತ ಮಹಿಳಾ ತಂಡದ ಪರ 68 ಐ-ಟಿ20 ಪಂದ್ಯಗಳನ್ನು ಆಡಿರುವ ಗೋಸ್ವಾಮಿ, 5.45ರ ಎಕಾನಮಿಯಲ್ಲಿ ರನ್‌ಗಳನ್ನು ಬಿಟ್ಟುಕೊಟ್ಟು 56 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ. 35 ವರ್ಷದ ಅನುಭವಿ ಆಟಗಾರ್ತಿ ಏಕದಿನ ಕ್ರಿಕೆಟ್‌ನಲ್ಲಿ (ಭಾರತ ಮಹಿಳಾ ತಂಡ ಈಗ ಟೆಸ್ಟ್‌ ಕ್ರಿಕೆಟ್‌ ಆಡುತ್ತಿಲ್ಲ) ತಮ್ಮ ಸೇವೆ ಮುಂದುವರಿಸಲಿದ್ದಾರೆ. ಏಕದಿನದಲ್ಲಿ 169 ಪಂದ್ಯಗಳನ್ನು ಆಡಿರುವ ಜೂಲನ್‌ 200 ವಿಕೆಟ್‌ ಪಡೆದಿದ್ದು, ಮಹಿಳಾ ಕ್ರಿಕೆಟ್‌ ಜಗತ್ತಿನಲ್ಲಿದು ವಿಶ್ವ ದಾಖಲೆಯಾಗಿದೆ. 

ಇತ್ತೀಚಿನ ದಿನಗಳಲ್ಲಿ ಚುಟುಕು ಕ್ರಿಕೆಟ್‌ನಲ್ಲಿ ಜೂಲನ್‌ ವಿಕೆಟ್‌ ಪಡೆಯುವಲ್ಲಿ ವಿಫಲರಾಗುತ್ತಿದ್ದು, ಬ್ಯಾಟಿಂಗ್‌ನಲ್ಲಿಯೂ ಎಂದಿನಂತೆ ತಮ್ಮ ದೊಡ್ಡ ಹೊಡೆತಗಳನ್ನು ತರುವಲ್ಲಿ ಯಶಸ್ಸು ಕಾಣುತ್ತಿಲ್ಲ. ಹೀಗಾಗಿ ಚುಟುಕು ಮಾದರಿಯ ಕ್ರಿಕೆಟ್‌ನಿಂದ ದೂರ ಸರಿದಿದ್ದಾರೆ. 

”ಭಾರತ ಟಿ20 ತಂಡದಲ್ಲಿನ ಅದ್ಭುತ ಪಯಣದಲ್ಲಿ ಬೆಂಬಲಿಸಿದ ಬಿಸಿಸಿಐ ಮತ್ತು ಸಹ ಆಟಗಾರ್ತಿಯರಿಗೆ ಗೋಸ್ವಾಮಿ ಧನ್ಯವಾದ ತಿಳಿಸಿದ್ದಾರೆ. ಅವರ ಮುಂದಿನ ಪಯಣಕ್ಕೆ ಶುಭವಾಗಲಿ,” ಎಂದು ಬಿಸಿಸಿಐ ಹೇಳಿಕೆ ನೀಡಿದೆ. 

ಜೂಲನ್‌ ಅವರ ಸ್ಥಾನವನ್ನು ತುಂಬುವ ಸಾಮರ್ಥ್ಯ‌ ಯುವ ವೇಗಿ ಶಿಖಾ ಪಾಂಡೆ ಅವರಲ್ಲಿದ್ದು, ಪೂಜಾ ವಸ್ತ್ರಕಾರ್‌ ಮತ್ತು ಮಾನಸಿ ಜೋಶಿ ಭಾರತ ತಂಡದ ವೇಗದ ಬೌಲಿಂಗ್‌ ದಾಳಿಗೆ ಬಲವಾಗುವ ಭರವಸೆಗಳಾಗಿದ್ದಾರೆ. 

ಗೋಸ್ವಾಮಿ ಮತ್ತು ಮಿಥಾಲಿ ರಾಜ್‌ ಸದ್ಯ ಭಾರತ ತಂಡದಲ್ಲಿ ಇರುವ ಅತ್ಯಂತ ಹಿರಿಯರು. ಪಶ್ಚಿಮ ಬಂಗಾಳದವರಾದ ಜೂಲನ್‌ 2002ರಲ್ಲಿ ಚೆನ್ನೈನಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ತಮ್ಮ 16 ವರ್ಷಗಳ ಸುದೀರ್ಘಾವಧಿಯ ವೃತ್ತಿಬದುಕಿನಲ್ಲಿ 10 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಜೂಲನ್‌, ಪಂದ್ಯವೊಂದರಲ್ಲಿ 10 ವಿಕೆಟ್‌ ಸಾಧನೆಯೊಂದಿಗೆ ಒಟ್ಟಾರೆ 40 ವಿಕೆಟ್‌ ಉರುಳಿಸಿದ್ದಾರೆ. 2007ರಲ್ಲಿ ಐಸಿಸಿ ವರ್ಷದ ಶ್ರೇಷ್ಠ ಮಹಿಳಾ ಕ್ರಿಕೆಟ್‌ ಆಟಗಾರ್ತಿ ಪ್ರಶಸ್ತಿಗೂ ಜೂಲನ್‌ ಭಾಜನರಾಗಿದ್ದರು.