ಅಂತರಾಷ್ಟ್ರೀಯ ನ್ಯಾಯಾಲಯ : ಕುಲಭೂಷಣ್‌ ಪ್ರಕರಣ ಫೆ. 18ರಿಂದ ವಿಚಾರಣೆ

0
596

ಪಾಕಿಸ್ತಾನದಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಕುಲಭೂಷಣ್‌ ಜಾಧವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಕೋರ್ಟ್‌ (ಐಸಿಜೆ) ಮುಂದಿನ ವರ್ಷ ಫೆಬ್ರುವರಿ 18ರಿಂದ 21ರ ವರೆಗೆ ಬಹಿರಂಗ ವಿಚಾರಣೆ ನಡೆಸಲಿದೆ.

ದಿ ಹೇಗ್‌ (ಪಿಟಿಐ): ಪಾಕಿಸ್ತಾನದಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಕುಲಭೂಷಣ್‌ ಜಾಧವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಕೋರ್ಟ್‌ (ಐಸಿಜೆ) ಮುಂದಿನ ವರ್ಷ 2019 ರ ಫೆಬ್ರುವರಿ 18ರಿಂದ 21ರ ವರೆಗೆ ಬಹಿರಂಗ ವಿಚಾರಣೆ ನಡೆಸಲಿದೆ.

‘ಪ್ರಕರಣದ ವಿಚಾರಣೆಯ ಇಂಗ್ಲಿಷ್‌ ಮತ್ತು ಫ್ರೆಂಚ್‌ ಅವತರಣಿಕೆಗಳನ್ನು ಬೇಡಿಕೆ ಆಧಾರದಲ್ಲಿ (ವಿಒಡಿ) ನೇರ ಪ್ರಸಾರ ಮಾಡಲಾಗುವುದು. ಐಸಿಜೆ ವೆಬ್‌ಸೈಟ್‌, ವಿಶ್ವಸಂಸ್ಥೆಯ ವೆಬ್‌ ಟಿವಿಯಲ್ಲಿ ನೇರ ಪ್ರಸಾರ ವೀಕ್ಷಿಸಬಹುದು’ ಎಂದು ಐಸಿಜೆ ಪ್ರಕಟಣೆ ತಿಳಿಸಿದೆ.

ಜಾಧವ್‌ ಅವರನ್ನು 2016ರ ಮಾರ್ಚ್‌ನಲ್ಲಿ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಪಾಕಿಸ್ತಾನದ ಭದ್ರತಾ ಪಡೆಗಳು ಬಂಧಿಸಿದ್ದವು. ಗೂಢಚಾರಿಕೆ ಹಾಗೂ ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಜಾಧವ್‌ ಸಂಚು ರೂಪಿಸಿದ್ದಾಗಿ ಪಾಕಿಸ್ತಾನ ಆರೋಪಿಸಿತ್ತು. ನಂತರ ವಿಚಾರಣೆ ನಡೆಸಿದ್ದ ಮಿಲಿಟರಿ ಕೋರ್ಟ್‌, 2017ರ ಏಪ್ರಿಲ್‌ನಲ್ಲಿ ಜಾಧವ್‌ಗೆ ಗಲ್ಲು ಶಿಕ್ಷೆ ವಿಧಿಸಿತ್ತು.ಇದನ್ನು ಪ್ರಶ್ನಿಸಿ ಭಾರತ ಅದೇ ವರ್ಷ ಮೇನಲ್ಲಿ ಅಂತರರಾಷ್ಟ್ರೀಯ ಕೋರ್ಟ್‌ ಮೆಟ್ಟಿಲೇರಿತ್ತು. ಭಾರತದ ಮನವಿಯನ್ನು ಪುರಸ್ಕರಿಸಿದ್ದ ಐಸಿಜೆ, ಜಾಧವ್‌ ಗಲ್ಲು ಶಿಕ್ಷೆಗೆ ತಡೆ ನೀಡಿ, ವಿಚಾರಣೆ ಮುಂದೂಡಿತ್ತು.